ಜಿಲ್ಲೆ

ಫುಟ್‌ಪಾತ್ ಒತ್ತುವರಿ ತೆರವು; 25ಕ್ಕೂ ಹೆಚ್ಚು ಅಂಗಡಿಗಳಿಗೆ ದಂಡ

Hassan - Mohan Kanthur

ಹಾಸನ: ನಗರದ ಹಲವೆಡೆ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಮೇಲೆ ನಗರಸಭೆ ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ ಒತ್ತುವರಿ ತೆರವುಗೊಳಿಸಿದ್ದಾರೆ. ಜತೆಗೆ 25ಕ್ಕೂ ಹೆಚ್ಚು ಅಂಗಡಿಗಳಿಗೆ ಸಾವಿರ ರೂ. ದಂಡ ವಿಧಿಸಿದ್ದಾರೆ.

ನಗರಸಭೆ ಆಯುಕ್ತ ಸತೀಶ್ ಅವರ ನೇತೃತ್ವದಲ್ಲಿ ನಗರದ ದೊಡ್ಡಗರಡಿ ಬೀದಿ ಸುತ್ತಮುತ್ತ ಸುಮಾರು 25 ಅಂಗಡಿಗಳ ಮೇಲೆ ದಾಳಿ ನಡೆಸಿ, ಸಾರ್ವಜನಿಕರು ತಿರುಗಾಡುವ ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದವರಿಗೆ ದಂಡದ ಮೂಲಕ ಬಿಸಿ ಮುಟ್ಟಿಸಿದರು.

ಕಳೆದ ಒಂದು ವಾರದಿಂದಲೂ ಫುಟ್‌ಪಾತ್ ತೆರವು ಕಾರ್ಯಾಚರಣೆ ಮತ್ತು ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಮುಂದುವರಿದಂತೆ ಶುಕ್ರವಾರ ಸಹ ದಾಳಿ ಮಾಡಿ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು.

ನಗರದ ಚಿಕ್ಕಗರಡಿ ಬೀದಿ, ದೊಡ್ಡಗರಡಿ ಬೀದಿ, ಚಿಕ್ಕಬಸದಿ ರಸ್ತೆ, ದೇವಿಗೆರೆ ಸರ್ಕಲ್, ಪಾಂಡುರಂಗ ದೇವಸ್ಥಾನದ ರಸ್ತೆ, ವಿರೂಪಾಕ್ಷ ದೇವಸ್ಥಾನ ರಸ್ತೆ, ತೆಲುಗರ ಬೀದಿ ಸೇರಿದಂತೆ ಹಲವೆಡೆ ಸಾರ್ವಜನಿಕರು ತಿರುಗಾಡುವ ಫುಟ್‌ಪಾತ್ ಮೇಲೆ ಅಂಗಡಿ ನಿರ್ಮಿಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದವು. ಈ ಭಾಗದಲ್ಲಿ ರಸ್ತೆಗಳು ಅತ್ಯಂತ ಕಿರಿದಾಗಿದ್ದು, ಒಂದು ವಾಹನ ಹೋದರೆ ಇನ್ನೊಂದು ವಾಹನಕ್ಕೆ ಜಾಗ ಬಿಡಲು ಕಷ್ಟಸಾಧ್ಯ. ಹೀಗಿರುವಾಗ ಸಾರ್ವಜನಿಕರು ಓಡಾಡುವ ಜಾಗದಲ್ಲಿ ಅಂಗಡಿಗಳನ್ನು ಹಾಕಿಕೊಂಡಿದ್ದು ಜನರು ರಸ್ತೆ ಮಧ್ಯದಲ್ಲಿ ತಿರುಗಾಡಬೇಕಾಗಿದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿತ್ತು. ಇದನ್ನು ಮನಗಂಡು ನಗರಸಭೆ ಅಧಿಕಾರಿಗಳು ಫುಟ್‌ಪಾತ್ ಮೇಲಿರುವ ಅಂಗಡಿಗಳ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಅಂಗಡಿಗಳನ್ನು ಹಾಕದಂತೆ ಮನವಿ ಮಾಡಿದರೂ ಕೂಡ ಕ್ಯಾರೇ ಎನ್ನದವರಿಗೆ ದಂಡದ ಬಿಸಿ ಮುಟ್ಟಿಸಿದರು. ಶುಕ್ರವಾರ ಕಾರ್ಯಾಚರಣೆಯಲ್ಲಿ ಸುಮಾರು 25ಕ್ಕೂ ಹೆಚ್ಚು ಅಂಗಡಿಗಳಿಗೆ ಎಚ್ಚರಿಕೆ ನೀಡಿದರಲ್ಲದೆ, ಮುಂದಿನ ದಿನಗಳಲ್ಲಿ ಇದೇ ರೀತಿ ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದಾಗಿ ಎಚ್ಚರಿಸಿ ಅವರಿಗೆ ಸ್ಥಳದಲ್ಲಿ ದಂಡ ವಿಧಿಸಿದರು.

ಮಾತಿನ ಚಕಮಕಿ

ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಫುಟ್‌ಪಾತ್ ತೆರವಿಗೆ ಮುಂದಾದ ವೇಳೆ ಕೆಲ ಅಂಗಡಿಯ ಮಾಲೀಕರು ವಿರೋಧ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದರು. ಅಲ್ಲದೆ ಅಂಗಡಿಗಳಿಗೆ ದಂಡ ಹಾಕಿ ರಸೀದಿ ನೀಡುವ ವೇಳೆ ನಾವು ಕಟ್ಟುವುದಿಲ್ಲ ಎಂದು ಪ್ರತಿರೋಧ ಒಡ್ಡುತ್ತಿದ್ದರು. ಇನ್ನೂ ಕೆಲ ಮಾಲೀಕರು ನಗರದ ಎಲ್ಲ ಕಡೆ ಇದೇ ರೀತಿಯ ಕಾನೂನು ತನ್ನಿ. ಕೇವಲ ಒಂದೆರಡು ಅಂಗಡಿಗಳ ಮೇಲೆ ನಿಮ್ಮ ಅಧಿಕಾರ ತೋರಿಸಬೇಡಿ ಎಂದು ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಅಧಿಕಾರಿಗಳ ತಾರತಮ್ಯದ ಆರೋಪ

ನಗರಸಭೆ ಅಧಿಕಾರಿಗಳು ದಿಢೀರನೆ ಬಂದು ಫುಟ್‌ಪಾತ್ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ. ಇಲ್ಲಿಯೂ ಕೂಡ ಸಾಕಷ್ಟು ತಾರತಮ್ಯ ನಡೆಯುತ್ತಿದೆ. ನಗರಸಭೆ ಸದಸ್ಯರು ಮತ್ತು ಪ್ರಭಾವಿಗಳ ಶ್ರೀರಕ್ಷೆ ಇದ್ದವರ ಅಂಗಡಿಗಳತ್ತ ಸುಳಿಯುತ್ತಿಲ್ಲ. ಕೇವಲ ಸಣ್ಣ-ಪುಟ್ಟ ಅಂಗಡಿಗಳ ಮೇಲೆ ದಾಳಿ ಮಾಡಿ ಸಾವಿರ ರೂ. ದಂಡ ಹಾಕುತ್ತಿದ್ದಾರೆ. ತೆರವು ಮಾಡುವುದಾದರೆ ಎಲ್ಲರಿಗೂ ಒಂದೇ ರೀತಿ ಮಾಡಿ ಎಂದು ಕೆಲ ಅಂಗಡಿ ಮಾಲೀಕರು ಆರೋಪಿಸಿದರು.

ನಗರಸಭೆಯ ಕೆಲ ಸದಸ್ಯರ ವಿರೋಧ?

ಸಾರ್ವಜನಿಕರ ಅನುಕೂಲಕ್ಕಾಗಿ ಫುಟ್‌ಪಾತ್ ತೆರವಿಗೆ ನಗರಸಭೆ ಮುಂದಾಗಿದೆ. ಆದರೆ ಇದಕ್ಕೆ ಸಹಕರಿಸಬೇಕಾದ ಕೆಲ ಸದಸ್ಯರೇ ವಿರೋಧ ವ್ಯಕ್ತಪಡಿಸಿ, ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ಭಾರೀ ಖಂಡನೆ ವ್ಯಕ್ತವಾಗುತ್ತಿದೆ. ಜನರಿಂದ ಚುನಾಯಿತರಾದ ಸದಸ್ಯರೇ ಮುಂದೆ ನಿಂತು ಫುಟ್‌ಪಾತ್ ಒತ್ತುವರಿ ತೆರವು ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಆದರೆ ಅಧಿಕಾರಿಗಳು ಮಾಡುತ್ತಿರುವ ಕೆಲಸಕ್ಕೆ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿ ತಮ್ಮ ವಾರ್ಡಿನಲ್ಲಿ ಕಾರ್ಯಾಚರಣೆ ಮಾಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೂಡ ಕೇಳಿಬಂದಿದೆ. ಶುಕ್ರವಾರ ಕೂಡ ದೊಡ್ಡಗರಡಿ ಬೀದಿಯಲ್ಲಿ ತೆರವು ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ನಗರಸಭೆ ಸದಸ್ಯೆಯ ಪತಿ ಆಗಮಿಸಿ ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸುತ್ತಿದ್ದುದು ಕಂಡು ಬಂದಿತು.