ಗೌರಿಬಿದನೂರು: ನಗರಸಭೆ ವ್ಯಾಪ್ತಿಯಲ್ಲಿ ಫುಟ್ಪಾತ್ ಒತ್ತುವರಿ ಮಾಡಿಕೊಂಡಿರುವವರು 2 ದಿನಗಳಲ್ಲಿ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು ಅಧಿಕಾರಿಗಳು ಗಡವು ನೀಡಿದ್ದಾರೆ.
ನಗರಸಭೆ ಆಯುಕ್ತ ಕೆ.ಜೆ.ರಮೇಶ್ ಹಾಗೂ ನಗರಠಾಣೆ ಪಿಎಸ್ಐ ವರಲಕ್ಷಿ$್ಮ ಸಿಬ್ಬಂದಿಯೊಂದಿಗೆ ನಗರದಲ್ಲಿ ಸಂಚರಿಸಿ ರಸ್ತೆ ಬದಿಯ ಅಂಗಡಿ, ಹೋಟೆಲ್, ವಾಣಿಜ್ಯ ಮಳಿಗೆಗಳು ಹಾಗೂ ಕಟ್ಟಡಗಳ ಮಾಲೀಕರಿಗೆ ಈ ಕುರಿತು ಎಚ್ಚರಿಕೆ ನೀಡಿದರು.
ಪೌರಾಯುಕ್ತ ಕೆ.ಜೆ.ರಮೇಶ್ ಮಾತನಾಡಿ, ಫುಟ್ಪಾತ್ ಇರುವುದು ಪಾದಾಚಾರಿಗಳು ಸುಗಮ ಹಾಗೂ ಸುರಕ್ಷಿತವಾಗಿ ಸಂಚರಿಸಲು. ಅವುಗಳನ್ನು ಒತ್ತುವರಿ ಮಾಡಿಕೊಂಡಲ್ಲಿ ಜನರಿಗೆ ತೊಂದರೆಯಾಗಬಹುದು, ಫುಟ್ಪಾತ್ ಒತ್ತುವರಿ ಮಾಡಿಕೊಂಡು ವ್ಯಾಪಾರ ವಹಿವಾಟು ನಡೆಸುವಂತಿಲ್ಲ. ನಗರದಲ್ಲಿ ನಗರಸಭೆ ಹಾಗೂ ಪೊಲೀಸ್ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು. ಸ್ವಯಂ ಪ್ರೇರಿತವಾಗಿ ಅಕ್ರಮ ಒತ್ತುವರಿ ತೆರವುಗೊಳಿಸಲು 2 ದಿನ ಕಾಲಾವಕಾಶ ನೀಡಲಾಗುವುದು. ಇಲ್ಲವಾದಲ್ಲಿ ನಗರಸಭೆಯಿಂದ ತೆರವುಗೊಳಿಸಲಾಗುವುದು ಎಂದರು.
ನಗರ ಠಾಣೆ ಪಿಎಸ್ಐ ವರಲಕ್ಷಿ$್ಮ ಮಾತನಾಡಿ, ಫುಟ್ಪಾತ್ ಅತಿಕ್ರಮಣ ಮಾಡಿಕೊಳ್ಳುವುದು ಕಾನೂನು ಬಾಹಿರ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಒತ್ತುವರಿ ತೆರವು ಮಾಡಬೇಕು. ಯಾವುದೇ ಕಾರಣಕ್ಕೂ ಕಾನೂನು ಸಂಘರ್ಷಕ್ಕೆ ಅವಕಾಶ ಕೊಡಬಾರದು ಎಂದರು.
ಕಂದಾಯ ನಿರೀಕ್ಷಕ, ಸಂಜೀವ್, ಆರೋಗ್ಯ ನಿರೀಕ್ಷಕ ನವೀನ್ ಇತರರು ಇದ್ದರು.