ಜಿಲ್ಲೆ

ಫಿಲ್ಟರ್ ಮರಳು ದಂಧೆ ಅವ್ಯಾಹತ! : ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ವಿರುದ್ಧ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಕಿಡಿ

ಗುಬ್ಬಿ : ತುರುವೇಕೆರೆ ತಾಲೂಕಿನ ಕೆರೆಗಳಲ್ಲಿ ಫಿಲ್ಟರ್ ಮರಳು ದಂಧೆ ಮಾಡುವ ಮೂಲಕ ಹಣ ಮಾಡಿರುವುದನ್ನು ಬಿಟ್ಟರೆ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ರೈತರ ಪರವಾಗಿ ಎಂದಿಗೂ ಕೆಲಸ ಮಾಡಿಯೇ ಇಲ್ಲ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಕಿಡಿಕಾರಿದರು.

ಸಿಎಸ್ ಪುರ ಹೋಬಳಿ ತುರುವೇಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿಂಡಿಸ್ಕೆರೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಬುಧವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಎಂ.ಟಿ. ಕೃಷ್ಣಪ್ಪ 2 ಬಾರಿ ಶಾಸಕರಾಗಿದ್ದರು. ಆದರೂ ಕೆರೆಗಳನ್ನು ತುಂಬಿಸದೆ, ಶಿಂಷಾ ನದಿಯ ಒಡಲಿನಿಂದ ಬರುತ್ತಿದ್ದ ಮರಳನ್ನು ಮಾರಿಕೊಂಡು ಹಣ ಮಾಡಿಕೊಂಡರು. ಇದನ್ನು ಬಿಟ್ಟರೆ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಗುತ್ತಿಗೆದಾರರಿಂದ ಕಮಿಷನ್ ಪಡೆದಿಲ್ಲ. ಅಂಥ ಚಾಳಿಯೂ ನನದಲ್ಲ. ಮಾಜಿ ಶಾಸಕರು 10 ವರ್ಷ ಇದೇ ಕೆಲಸ ಮಾಡಿಕೊಂಡು ಬಂದಿರುವುದು ತಾಲೂಕಿನ ಜನರಿಗೆ ಗೊತ್ತಿದೆ. ಜನರು ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಹಾಗಾಗಿ ಅಸ್ತಿತ್ವ ತೋರಿಸಿಕೊಳ್ಳಲು ಸರ್ಕಾರಗಳ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಹೇಳಿಕೊಂಡು ಜನರನ್ನು ಕರೆಸಿದ್ದಾರೆ ಎಂದು ದೂರಿದರು.

ಕಲ್ಲುಗಳು ಅಲ್ಲಿಯೇ ಇವೆ: ಕಲ್ಲಿನ ದಿಮ್ಮಿಗಳನ್ನು ತೆಗೆದುಕೊಂಡು ಹೋಗಿರುವುದಾಗಿ ಕೃಷ್ಣಪ್ಪ ಆರೋಪಿಸಿದ್ದಾರೆ. ಅಲ್ಲಿಯೇ ಇನ್ನೂ ಸಾಕಷ್ಟು ಕಲ್ಲುಗಳು ಬಿದ್ದಿವೆ. ಅವುಗಳನ್ನು ನೀವು ಮತ್ತು ನಿಮ್ಮ ಶಿಷ್ಯರು ತೆಗೆದುಕೊಂಡು ಹೋಗಬಹುದು ಎಂದು ಮಸಾಲೆ ಜಯರಾಂ ಹೇಳಿದರು. ಪ್ರತಿ ತಿಂಗಳು 200 ಕೋಟಿ ರೂಪಾಯಿ ಸಾಂಬಾರು ಪದಾರ್ಥದ ವ್ಯವಹಾರ ಮಾಡುವ ನನಗೆ ಕಲ್ಲುಗಳನ್ನು ಕೊಂಡೊಯ್ದು ಮಾರಿಕೊಳ್ಳುವ ಸ್ಥಿತಿ ಬಂದಿಲ್ಲ. ಆದರೆ ನೀವು ಪ್ರತಿಭಟನೆ ಮಾಡುವ ಮೂಲಕ ಎಲ್ಲರನ್ನೂ ಹೆದರಿಸಿ ಸ್ಟ್ರೈಕ್ ಕೃಷ್ಣಪ್ಪ ಆಗಿದ್ದೀರ ಎಂದು ವಾಗ್ದಾಳಿ ನಡೆಸಿದರು. ನಾವು ಶೇ.90 ಕೆರೆಗಳನ್ನು ತುಂಬಿಸಿ, ತಾಲೂಕಿನಲ್ಲಿ ಕೃಷಿ ಚಟುವಟಿಕೆಗೆ ಒತ್ತು ನೀಡಿದ್ದೇವೆ. ಹದಿನೈದು ವರ್ಷಗಳಿಂದ ತುಂಬಿರದ ಸಿಎಸ್ ಪುರ ಕೆರೆ ಭರ್ತಿಯಾಗಿದೆ. ಇದನ್ನು ಸಹಿಸಲು ಕೃಷ್ಣಪ್ಪನಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಇವರು ಹೇಮಾವತಿ ಹರಿಕಾರರಲ್ಲ. ಮರಳುದಂಧೆಯ ಹರಿಕಾರ ಎಂದು ಏಕವಚನದಲ್ಲಿ ಕಿಡಿಕಾರಿದರು.

ತಾಲೂಕಿನ ಜನರು ಇವರನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಇನ್ನೂ ಇಪ್ಪತ್ತು ವರ್ಷ ನಾನೇ ಶಾಸಕನಾಗಿರುತ್ತೇನೆ. ಅಭಿವೃದ್ಧಿಯ ಕಾರ್ಯಗಳೇ ನನಗೆ ಶ್ರೀರಕ್ಷೆ. ಮಸಾಲಾ ಜಯರಾಂ, ತುರುವೇಕೆರೆ ಶಾಸಕ