ಚಿಕ್ಕಮಗಳೂರು: ಎಂಬಿಬಿಎಸ್ ಓದಲೆಂದು ಫಿಲಿಪೈನ್ಸ್ಗೆ ತೆರಳಿದ್ದ ಚಿಕ್ಕಮಗಳೂರಿನ ವೈದ್ಯ ವಿದ್ಯಾರ್ಥಿನಿ ಐಶ್ವರ್ಯ ಫಿಲಿಪೈನ್ಸ್ನಲ್ಲಿ ಸಂಭವಿಸಿರುವ ಪ್ರಬಲ ಭೂಕಂಪನದಲ್ಲಿ ಸಿಲುಕು ಪರದಾಡುವಂತಾಗಿದೆ.
ಚಿಕ್ಕಮಗಳೂರು ನಗರದ ಸತ್ಯಪಾಲ್ ಎಂಬುವರ ಪುತ್ರಿ ಕಳೆದ ಐದು ವರ್ಷದ ಹಿಂದೆ ಎಂಬಿಬಿಎಸ್ ಓದಲೆಂದು ಫಿಲಿಪೈನ್ಸ್ಗೆ ತೆರಳಿದ್ದಳು. ಈಗಾಗಲೇ ಆಕೆಯ ಕೋರ್ಸ್ ಮುಗಿದಿದ್ದು, ಇನ್ನೇನು ತವರಿಗೆ ವಾಪಸ್ ಬರಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಪ್ರಬಲ ಭೂ ಕಂಪನ ಸಂಭವಿಸಿ ಐಶ್ವರ್ಯ ಫಿಲಿಫೈನ್ಸ್ನ ಸಿಬು ನಗರದಲ್ಲಿ ಸಿಲುಕಿ ವಾಪಸ್ ಬರಲಾಗದೆ ಪರದಾಡುತ್ತಿದ್ದಾಳೆ.
ಫಿಲಿಪೈನ್ಸ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದ ಮಧ್ಯೆ ಸಿಬು ನಗರಕ್ಕೆ ಸುನಾಮಿ ಅಪ್ಪಳಿಸುವ ಆತಂಕ ಕೂಡ ಎದುರಾಗಿದೆ. ಇದರಿಂದಾಗಿ ಅಲ್ಲಿಗೆ ಮೆಡಿಕಲ್ ಕೋರ್ಸ್ ಓದಲು ತೆರಳಿದ್ದ ಚಿಕ್ಕಮಗಳೂರಿನ ವೈದ್ಯ ವಿದ್ಯಾರ್ಥಿನಿ ಐಶ್ವರ್ಯ ಆತಂಕಕ್ಕೊಳಗಾಗಿ ತನ್ನ ಪಾಲಕರಿಗೆ ಮಾಹಿತಿ ನೀಡಿದ್ದಾಳೆ.
ಇದರಿಂದ ಆತಂಕಕ್ಕೆ ಒಳಗಾಗಿರುವ ಪಾಲಕರು ಸುರಕ್ಷಿತವಾಗಿ ತಮ್ಮ ಮಗಳನ್ನ ವಾಪಸ್ ಕರೆತರುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಐಶ್ವರ್ಯ ಮಾತ್ರವಲ್ಲದೆ ಹಲವು ಭಾರತೀಯ ವಿದ್ಯಾರ್ಥಿಗಳು ಭೂಕಂಪದಿAದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಊಟ, ತಿಂಡಿ, ನೀರು ಯಾವುದೂ ಸಿಗದೇ ಪರದಾಡುತ್ತಿದ್ದಾರೆ ಎಂಬ ವಿಚಾರವನ್ನು ಐಶ್ವರ್ಯ ಪಾಲಕರಿಗೆ ತಿಳಿಸಿದ್ದಾಳೆ. ಐಶ್ವರ್ಯ ಮೆಡಿಕಲ್ ಓದುತ್ತಿರುವ ಕಾಲೇಜಿನಲ್ಲಿಯೇ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳ ಕನಿಷ್ಟ ೫೦ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.