ಜಿಲ್ಲೆ

ಫಿರಂಗಿ ಮೊರೆತಕ್ಕೆ ಅಂಜದ ಹೊಸ ಆನೆಗಳು

ಮೈಸೂರು: ದಸರಾ ಅಂಗವಾಗಿ ಶುಕ್ರವಾರ ಗಜಪಡೆಗೆ ನಡೆದ 2ನೇ ಹಂತದ ಸಿಡಿಮದ್ದು ಸಿಡಿಸುವ ತಾಲೀಮಿನಲ್ಲಿ ಮೂರು ಹೊಸ ಆನೆಗಳು ಧೈರ್ಯ ಪ್ರದರ್ಶಿಸಿದವು.

ನಗದ ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ಕುಶಾಲತೋಪು ಸಿಡಿಸಲು ಫಿರಂಗಿಗಳನ್ನು ಪೊಲೀಸರು ಅಣಿಗೊಳಿಸಿದ್ದರು.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯ 14 ಆನೆ, ಅಶ್ವಪಡೆಯ 35 ಕುದುರೆಗಳು ಫಿರಂಗಿ ಸದ್ದಿಗೆ ಹೊಂದಿಕೊಳ್ಳುವ ತಾಲಿಮಿಗೆ ಸಜ್ಜಾಗಿದ್ದವು. 7 ಫಿರಂಗಿ ಬಳಸಿ, ತಲಾ ಮೂರು ಸುತ್ತಿನಂತೆ ಸಿಡಿಮದ್ದು ಸಿಡಿಸಲಾಯಿತು. ಫಿರಂಗಿ ದಳದ 35 ಸಿಬ್ಬಂದಿ 21 ಬಾರಿ ಸಿಡಿಮದ್ದು ಸ್ಫೋಟಿಸಿದರು.ಇದಕ್ಕೆ ಆನೆಗಳು ಅಂಜಲಿಲ್ಲ.

ಮೊದಲ ಸಿಡಿಮದ್ದು ತಾಲೀಮಿನಲ್ಲಿ ಫಿರಂಗಿ ಸದ್ದಿಗೆ ಹೊಸ ಆನೆಗಳಾದ ಶ್ರೀಕಂಠ, ಹೇಮಾವತಿ ಆನೆಗಳು ಬೆದರಿದ್ದವು. ಜತೆಗೆ, ಹಿಮ್ಮುಖವಾಗಿ ನಿಂತುಕೊಂಡು ಆತಂಕ ವ್ಯಕ್ತಪಡಿಸಿದ್ದವು. ಆದರೆ, 2ನೇ ಫಿರಂಗಿ ತಾಲೀಮಿನಲ್ಲಿ ಶ್ರೀಕಂಠ, ಹೇಮಾವತಿ ಬೆದರಲಿಲ್ಲ.

ಜತೆಗೆ, ಉಳಿದ ಆನೆಗಳು ಸಮಾಧಾನದಿಂದ ಸಿಡಿಮದ್ದು ಸಿಡಿತದ ಶಬ್ದಕ್ಕೆ ಅಂಜಲಿಲ್ಲ. ಒಂದು ಸುತ್ತಿಗೆ ಒಂದು ನಿಮಿಷದ ವಿರಾಮದ ನಂತರ ಸಿಡಿಮದ್ದು ಸಿಡಿಸಲಾಯಿತು. ಇದರಿಂದ ಆನೆಗಳು ಸುಧಾರಿಸಿಕೊಂಡು ತಾಲೀಮಿನಲ್ಲಿ ಯಾವುದೇ ಭಯವಿಲ್ಲದೆ ಪಾಲ್ಗೊಂಡವು.

ಆದರೆ, 5-6 ಕುದುರೆಗಳು ಬೆದರಿದವು. ಅಬ್ಬರದ ಶಬ್ಧಕ್ಕೆ ಹೊಂದಿಕೊಳ್ಳಲು 35 ಕುದುರೆಗಳ ಪೈಕಿ ಕೆಲ ಕುದುರೆಗಳು ಬೆಚ್ಚಿಬಿದ್ದವು. ಎರಡು ಅಶ್ವಗಳಂತೂ ಪಾರ್ಕಿಂಗ್ ಸ್ಥಳದ ಕಾಂಪೌಂಡ್ ಕಡೆ ತೆರಳಿ ಮೇಲಕ್ಕೆ ಎಗರಲು ಪ್ರಯತ್ನಿಸಿದವು.

ಈ ವೇಳೆ ಕುದುರೆ ಮೇಲೆ ಕುಳಿತ್ತಿದ್ದ ಮೌಂಟೆಂಡ್ ಸಿಬ್ಬಂದಿ ಕುದುರೆ ಮೇಲಿನಿಂದ ಕೆಳಗೆ ಇಳಿದು, ಅದನ್ನು ಸಂತೈಸುವ ಪ್ರಯತ್ನ ಮಾಡಿದರು. ಆದರೂ ಎರಡು ಕುದುರೆಗಳು ಕೊನೆ ಸುತ್ತಿನ ಸಿಡಿಮದ್ದು ಸಿಡಿತದ ಶಬ್ದಕ್ಕೂ ಹೌಹಾರಿದವು. 21ನೇ ಸಿಡಿಮದ್ದು ಸಿಡಿದ ಕೆಲ ಸಮಯದ ನಂತರ ಆ ಕುದುರೆಗಳು ನಿಯಂತ್ರಣಕ್ಕೆ ಬಂದವು.

‘ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ 2ನೇ ಹಂತದ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ನಡೆದಿದೆ. ಕೆಲ ದಿನಗಳಲ್ಲಿ ಅಂತಿಮ ಹಂತದ ಸಿಡಿಮದ್ದು ತಾಲೀಮು ನಡೆಸಲಾಗುವುದು’ ಎಂದು ಮೈಸೂರು ವೃತ್ತದ ಸಿಎಫ್ ರವಿಶಂಕರ್ ತಿಳಿಸಿದರು.

ಮೊದಲ ತಾಲೀಮಿನಲ್ಲಿ ಬೆದರಿದ್ದ ಹೊಸ ಆನೆಗಳಾದ ಶ್ರೀಕಂಠ ಹಾಗೂ ಹೇಮಾವತಿ ಆನೆ ಈ ಬಾರಿ ಸಿಡಿಮದ್ದು ಶದ್ಬಕ್ಕೆ ಹೊಂದಿಕೊಂಡಿವೆ. ಎಲ್ಲ 14 ಆನೆಗಳು ಸಿಡಿಮದ್ದಿನ ಶಬ್ದಕ್ಕೆ ಉತ್ತಮವಾಗಿ ಪ್ರತಿಕ್ರಿಯಿಸಿವೆ ಎಂದು ಡಿಸಿಎಫ್ ಡಾ.ಐ.ಬಿ.ಪ್ರಭುಗೌಡ ತಿಳಿಸಿದರು.

ತಾಲೀಮಿನ ವೇಳೆ ಸಿಎಆರ್ ಡಿಸಿಪಿ ಸಿದ್ದನಗೌಡ ಪಾಟೀಲ್, ಎಸಿಪಿ ಕುಮಾರಸ್ವಾಮಿ, ಆರ್‌ಎಫ್‌ಒ ನದೀಮ್, ಪಶುವೈದ್ಯ ಡಾ.ಆದರ್ಶ್, ಸಹಾಯಕರಾದ ರಂಗರಾಜು, ಅಕ್ರಂ ಇತರರಿದ್ದರು.