ಜಿಲ್ಲೆ

ಫಾಸ್ಟ್ ಫುಡ್ ಸೇವನೆ ಬೇಡ, ಶ್ರೀನಿವಾಸಪುರ ಗ್ರಾಪಂ ಸದಸ್ಯ ಹನುಮಂತರಾಜು ಸಲಹೆ, ಸುಗ್ಗಿ ಸಂಭ್ರಮಕ್ಕೆ ಚಾಲನೆ

Bengaluru Rural

ನೆಲಮಂಗಲ: ಸಮಾಜದ ಬೆಳವಣಿಗೆಗೆ ಸಹಕಾರಿಯಾಗುವ ಸಂಸ್ಕೃತಿ ಸದಾಚಾರಗಳನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯ್ಯಬೇಕಾದ ಅಗತ್ಯವಿದೆ ಎಂದು ಶ್ರೀನಿವಾಸಪುರ ಗ್ರಾಮ ಪಂಚಾಯಿತಿ ಸದಸ್ಯ ಹನುಮಂತರಾಜು ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಅಂತಿಮವರ್ಷದ ಪದವಿ ವಿದ್ಯಾರ್ಥಿಗಳು ಆಯೋಜಿಸಿದ್ದ ಸುಗ್ಗಿಸಂಭ್ರಮದಲ್ಲಿ ಮಾತನಾಡಿದರು.

ಕೆಲದಶಕಗಳ ಹಿಂದೆ ಮನುಷ್ಯನ ಜೀವಿತಾವಧಿ ಹೆಚ್ಚಿತ್ತು. ಈಗ ಫಾಸ್ಟ್ ಫುಡ್‌ಗೆ ಅವಲಂಬಿತರಾಗಿದ್ದು ಬೇಗನೇ ಇಹಲೋಕ ತ್ಯಜಿಸುತ್ತಿದ್ದಾರೆ ಎಂದರು.

ವೈಜ್ಞಾನಿಕವಾಗಿ ಮುಂದುವರೆದಿರುವ ಕಾಲಘಟ್ಟದಲ್ಲಿ ಆಹಾರ ಪ್ರದಾರ್ಥಗಳಲ್ಲಿ ಕಲಬೆರೆಕೆಯಿಂದಾಗಿ ಆರೋಗ್ಯದ ಮೇಲೆ ಕೆಟ್ಟಪರಿಣಾಮ ಬೀರುತ್ತಿದೆ. ಆಹಾರ ಪ್ರದಾರ್ಥ ಉತ್ಪಾದಕರು ಲಾಭಗಳಿಕೆಗಷ್ಟೇ ಪ್ರಾಮುಖ್ಯತೆ ನೀಡದೇ ಮನುಕುಲದ ಆರೋಗ್ಯ, ಉಳಿವಿನ ಬಗ್ಗೆಯೂ ಚಿಂತನೆ ನಡೆಸಬೇಕಿದೆ ಎಂದರು.

ಆರಂಭದಲ್ಲಿ ಖುಷಿ ನೀಡಿ ಜೀವನವನ್ನೆ ಬಲಿ ತಗೆದುಕೊಳ್ಳುವ ಚಟಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ನಮ್ಮ ಬೆಳವಣಿಗೆಗೆ ಕಾರಣವಾಗಿರುವ ಪಾಲಕರು ಮತ್ತು ಗುರುಹಿರಿಯರನ್ನು ನಿತ್ಯ ಸ್ಮರಿಸಬೇಕು. ಸಹನೆ, ತಾಳ್ಮೆ ಗುಣಗಳನ್ನು ಬೆಳೆಸಿಕೊಂಡಲ್ಲಿ ಜೀವನದಲ್ಲಿ ಯಶಸ್ವಿಯಾಗಬಹುದು ಎಂದರು.

ಸಿಂಚನಾ ಕಲಾ ಕೇಂದ್ರದ ಅಧ್ಯಕ್ಷ ಸಿ.ಎಚ್.ಸಿದ್ದಯ್ಯ ಮಾತನಾಡಿ, ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳನ್ನು ಸುಗ್ಗಿಯ ಕಾಲದಲ್ಲಿ ರಾಶಿ ಮಾಡಿ ಮನೆಗೆ ಕೊಂಡೊಯ್ಯವುದು ಸಾಮಾನ್ಯ. ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಹೆಚ್ಚಾಗಿರುವ ಸನ್ನಿವೇಶದಲ್ಲಿ ಸುಗ್ಗಿ ಸಂಭ್ರಮದ ಹೆಸರಿನಲ್ಲಿ ಕಾಲೇಜಿನಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಿರುವ ವಿದ್ಯಾರ್ಥಿ ಪ್ರಾಧ್ಯಾಪಕರ ಕಾರ್ಯ ಪ್ರಶಂಸನೀಯ ಎಂದರು.

ರಾಸಾಯನಿಕ ಗೊಬ್ಬರ, ಕೀಟನಾಶಕ, ವಿದೇಶಿ ತಳಿಗಳಿಂದಾಗಿ ಪೌಷ್ಟಿಕಾಂಶಯುತ ಆಹಾರ ಪ್ರದಾರ್ಥ ದೊರೆಯುತ್ತಿಲ್ಲ. ಆದ್ದರಿಂದ ಸಾವಯವ ಕೃಷಿ ಪದ್ಧತಿ ಅಳವಡಿಕೆ ಜತೆಗೆ ದೇಸಿ ತಳಿ ಹಸುಗಳ ಸಾಕಣೆ ಮಾಡಬೇಕಿದೆ. ಸಿರಿಧಾನ್ಯ ಬಳಕೆ ಮಾಡಬೇಕು ಎಂದರು.

ಸುಗ್ಗಿಸಂಭ್ರಮ: ರೈತರು ಕೃಷಿ ಜಮೀನಿನಲ್ಲಿ ಬೆಳೆಗಳನ್ನು ಒಕ್ಕಣೆ ಮಾಡಿ ಕಣದಲ್ಲಿ ರಾಶಿ ಹಾಕುವಂತೆ ರಾಗಿ, ಭತ್ತ ಸೇರಿ ನವಧಾನ್ಯಗಳ ಜತೆಗೆ ಕೃಷಿ ಉಪಕರಣ ಪ್ರದರ್ಶನಕ್ಕಿರಿಸಿ, ಗೋಪೂಜೆ ನೆರವೇರಿಸಿ ಸುಗ್ಗಿಸಂಭಮ ಆಚರಿಸಿದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದರು.

ಕಾಲೇಜು ಪ್ರಾಂಶುಪಾಲ ಪ್ರೊ. ಬಾಲಕೃಷ್ಣಯ್ಯ, ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಕಲಾಶಿಕ್ಷಕ ಅಪ್ಪಸಾಹೇಬ್‌ಗಾಣಿಗೇರ್, ಪ್ರಾಧ್ಯಾಪಕರಾದ ಡಾ.ತೋಪೇಶ್, ಹನುಮಂತರಾಜು, ಡಾ.ಜಯಪ್ಪ, ಡಾ.ಪ್ರಮೀಳಾ ರವೀಶ್, ಶ್ರೀನಿವಾಸ್, ನಯನಾ, ಗಾಯತ್ರಿ, ಮಂಜಪ್ಪ, ಎನ್‌ಎಸ್‌ಎಸ್ ಅಧಿಕಾರಿ ಡಾ.ಪುಷ್ಪಾ ಮತ್ತಿತರರು ಉಪಸ್ಥಿತರಿದ್ದರು.