ಜಿಲ್ಲೆ

ಫಾರ್ಮರ್ ಕ್ರಾಪ್ ಸರ್ವೆ ಆಪ್ ಎಡವಟ್ಟು

ಶಿರಸಿ: ಬೆಳೆ ಸರ್ವೆ ತಂತ್ರಾಂಶದಲ್ಲಿ ರೈತರು ಸ್ವತಃ ದಾಖಲಿಸಿದ ಬೆಳೆಯ ಹೆಸರೇ ಕೆಲ ಪಹಣಿ ಪತ್ರಿಕೆಯಲ್ಲಿ ಮಾಯವಾಗಿದೆ. ಜತೆ ಹಲವು ಪಹಣಿಗಳಲ್ಲಿ ಉಪಬೆಳೆಯೇ ಪ್ರಧಾನ ಬೆಳೆಯಾಗಿ ಬದಲಾಗಿದೆ!

ರೈತರು ಸ್ವತಃ ಬೆಳೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದ ಫಾರ್ಮರ್ ಕ್ರಾಪ್ ಸರ್ವೆ ಆಪ್​ನಲ್ಲಿ ಮುಖ್ಯ ಬೆಳೆಯನ್ನೇ ಪಹಣಿ ಪತ್ರಿಕೆಯಲ್ಲಿ ಕೈಬಿಟ್ಟು ಬೇರೆ ಬೇರೆ ಬೆಳೆ ದಾಖಲಾಗುತ್ತಿದೆ. ಇದರಿಂದ ಬೆಳೆಸಾಲ, ಬೆಳೆವಿಮೆ ಸೌಲಭ್ಯದ ಮೇಲೆ ಕರಿನೆರಳು ಆವರಿಸಿದ್ದು, ಅನೇಕ ಬೆಳೆಗಾರರು ಕಂಗಾಲಾಗಿದ್ದಾರೆ.

ಅಡಕೆ ಬದಲಿಗೆ ಬಾಳೆ!: 2020ರ ಜೂನ್, ಜುಲೈ, ಆಗಸ್ಟ್​ನಲ್ಲಿ ಬೆಳೆಗಾರರ ಮೊಬೈಲ್​ಗಳಲ್ಲಿ ಫಾರ್ಮರ್ ಕ್ರಾಪ್ ಸರ್ವೆ ತಂತ್ರಾಂಶ ಅಳವಡಿಸಿಕೊಂಡು ಸರ್ವೆ ಕಾರ್ಯ ಮಾಡಲಾಗಿತ್ತು. ಜತೆಗೆ, ಕೆಲವೆಡೆ ಕೃಷಿ ಇಲಾಖೆ ಮೂಲಕ ಜನರನ್ನು ನೇಮಿಸಿ ಬೆಳೆ ಸರ್ವೆ ನಡೆಸಲಾಗಿತ್ತು. ಅಂದು ಮಾಡಿದ ಬೆಳೆ ಸರ್ವೆ ಇದೀಗ ಪಹಣಿಯಲ್ಲೂ ದಾಖಲಾಗಿದ್ದು, ಮುಖ್ಯ ಬೆಳೆಯ ಕಾಲಂನಲ್ಲಿ ಇರಬೇಕಿದ್ದ ಅಡಕೆ ಬದಲಿಗೆ ಬಾಳೆ ಎಂದು ಬರೆಯಲಾಗಿದೆ.

ಅಡಕೆ ಬೆಳೆಗಾರರ ಭಾಗಾಯ್ತ ಕಾಲಂ ಖಾಲಿ ಬಿಡಲಾಗಿದೆ. ಮುಖ್ಯವಾಗಿ ಒಂದೇ ಬೆಳೆ ದಾಖಲಿಸಿದ್ದ ಪಹಣಿಯಲ್ಲಿ ಈ ಎಡವಟ್ಟು ಆಗಿಲ್ಲ. ಬದಲಿಗೆ ಅಡಕೆ, ಬಾಳೆ, ತೆಂಗಿನಂತಹ ಮಿಶ್ರ ಬೆಳೆಯ ತೋಟದಲ್ಲಿ ಈ ಸಮಸ್ಯೆ ಉಂಟಾಗಿದೆ.

ಬೆಳೆಸಾಲಕ್ಕೆ ಕೊಕ್ಕೆ?: ಬಹುವಾರ್ಷಿಕ ಅಡಕೆಯ ಬದಲಿಗೆ ಬಾಳೆ ಮುಖ್ಯ ಬೆಳೆಯಾಗಿ ನಮೂದಾಗುತ್ತಿದ್ದರೆ, ಅಡಕೆ, ಕಾಳು ಮೆಣಸು, ಏಲಕ್ಕಿ ಉಪ ಬೆಳೆಯಾಗಿ ಗುರುತಾಗಿದೆ. ಮುಖ್ಯ ಬೆಳೆ ಅಡಕೆಯೇ ಕೆಲವೆಡೆ ಮಾಯವಾಗಿರುವುದು, ಕೆಲವೆಡೆ ಮಿಶ್ರ ಬೆಳೆ ಕಾಲಂಗೆ ಹೋಗಿದ್ದರಿಂದ ಇದು ರೈತರಿಗೆ ಏಪ್ರಿಲ್​ನಲ್ಲಿ ಸಿಗಬೇಕಾದ ಬೆಳೆ ಸಾಲಕ್ಕೂ, ಬೆಳೆವಿಮೆಗೂ ಸಂಕಷ್ಟ ತಂದೊಡ್ಡಲಿದೆ.

ಸರ್ಕಾರದ ಈ ಆಪ್​ನಲ್ಲಿ ಮೊದಲೇ ಮುಖ್ಯ ಬೆಳೆ, ಅಂತರ ಬೆಳೆ ಪ್ರತ್ಯೇಕವಾಗಿ ದಾಖಲಿಸಲು ಅವಕಾಶ ನೀಡಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಬದಲಿಗೆ ಎಲ್ಲವೂ ಮುಖ್ಯ ಹಾಗೂ ಅಂತರ ಬೆಳೆ ಎಂದು ದಾಖಲಿಸಲು ಅವಕಾಶ ಮಾಡಿತ್ತು. ಭಾಗಾಯ್ತದ ಪ್ರಸ್ತಾಪ ಕೂಡ ಇಲ್ಲವಾಗಿತ್ತು. ಇದು ಸಮಸ್ಯೆ ಸೃಷ್ಟಿಗೆ ಕಾರಣವಾಗಿದೆ ಎಂಬುದು ರೈತರ ಮಾತು.

ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರ ಶಿಫಾರಸ್ಸು ಮೂಲಕ ಪಹಣಿಯ ದುರಸ್ತಿ ಮಾಡುವ ಅಧಿಕಾರ ಉಪ ತಹಸೀಲ್ದಾರರು ಅಥವಾ ತಹಸೀಲ್ದಾರರಿಗೆ ನೀಡಬೇಕು. ಆಪ್​ನಲ್ಲೂ ಮುಖ್ಯಬೆಳೆ, ಅಂತರ ಬೆಳೆ, ಬದುವಿನ ಬೆಳೆ ಎಂದು ಪ್ರತ್ಯೇಕವಾಗಿ ದಾಖಲಿಸಿ ಭೂಮಿ

ಸಾಫ್ಟ್​ವೇರ್​ಗೆ ಕೊಡುವಂತಾಗಬೇಕು. ಹಾಗಾದಾಗ ಮಾತ್ರ ಈ ಗೊಂದಲಕ್ಕೆ ಶೀಘ್ರ ತೆರೆ ಎಳೆಯಬಹುದು. ಇಲ್ಲವಾದರೆ ಬೆಳೆಸಾಲ, ಬೆಳೆ ವಿಮೆ ಪಡೆಯುವಲ್ಲಿ ಮೇಲೆ ವ್ಯರಿತಿಕ್ತ ಪರಿಣಾಮ ಬೀರುತ್ತದೆ. | ರಾಘವೇಂದ್ರ ಹೆಗಡೆ ಅಡಕೆ ಬೆಳೆಗಾರ
ಬಹು ವಾರ್ಷಿಕ ಬೆಳೆ ಹಾಗೂ ಮಿಶ್ರ ಬೆಳೆ ಇದ್ದಲ್ಲಿ ಈ ಸಮಸ್ಯೆ ಆಗಿದ್ದು ಗಮನಕ್ಕೆ ಬಂದಿದೆ. ಪರಿಹಾರ ಕುರಿತು ಸಂಬಂಧಪಟ್ಟವರ ಜತೆ ಸಮಾಲೋಚಿಸಿ ರೈತರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. | ಎಚ್.ಕೆ. ಕೃಷ್ಣಮೂರ್ತಿ ಅಪರ ಜಿಲ್ಲಾಧಿಕಾರಿ