ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ, ಚುನಾವಣಾ ಕರ್ತವ್ಯಗಳಿಗೆ ನೇರವಾಗಿ ನಿಯುಕ್ತರಾಗುವ ವಿವಿಧ ಇಲಾಖೆಗಳ ಅಧಿಕಾರಿಗಳನ್ನು, ಸ್ವಂತ ಜಿಲ್ಲೆ ಅಥವಾ ಮೂರು ವರ್ಷಗಳ ಸೇವಾವಧಿ ಪೂರ್ಣಗೊಳಿಸಿರುವುದನ್ನು ಆಧರಿಸಿ, ಮಾದರಿ ನೀತಿ ಸಂಹಿತೆ ಮುಕ್ತಾಯವಾಗುವವರೆಗೂ ತಾತ್ಕಾಲಿಕವಾಗಿ ಬೇರೆಡೆ ವರ್ಗಾಯಿಸುವುದು ನಡೆದುಕೊಂಡು ಬಂದಿರುವ ಪದ್ಧತಿ.
ಆದರೆ, ಈ ಬಾರಿ ಪ್ರಥಮ ಎಂಬಂತೆ ಭಾರತ ಚುನಾವಣಾ ಆಯೋಗ, ಲೋಕಸಭೆ ಚುನಾವಣೆ ಹಾಗೂ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಓಡಿಶಾ ಮತ್ತು ಸಿಕ್ಕಿಂ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಅನ್ವಯಿಸುವಂತೆ ಹೊರಡಿಸಿರುವ ಆದೇಶದಲ್ಲಿ, ಅಬಕಾರಿ ಇಲಾಖೆಯ ಸಬ್‌ಇನ್ಸ್‌ಪೆಕ್ಟರ್ ಮತ್ತು ಮೇಲ್ದರ್ಜೆ ಅಧಿಕಾರಿಗಳ ವರ್ಗಾವಣೆಗೆ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ, ಈಚೆಗೆ ಈ ಇಲಾಖೆಯ 230 ಸಬ್‌ಇನ್ಸ್‌ಪೆಕ್ಟರ್ಸ್, 280 ಇನ್ಸ್‌ಪೆಕ್ಟರ್ಸ್, ಐವರು ಅಧೀಕ್ಷರು, 30 ಡಿವೈಎಸ್‌ಪಿಗಳು, ಒಂಬತ್ತು ಮಂದಿ ಡೆಪ್ಯೂಟಿ ಕಮಿಷನರ್‌ಗಳು, ಇಬ್ಬರು ಅಡಿಷನಲ್ ಕಮಿಷನರ್‌ಗಳ ಸಹಿತ ಹಲವು ಎ, ಬಿ ಹಾಗೂ ಸಿ ಗ್ರೂಫ್‌ನ ಅಧಿಕಾರಿಗಳನ್ನು ವರ್ಗಾಯಿಸಿದೆ.
2018ರ ಲೋಕಸಭಾ ಚುನಾವಣೆ ವೇಳೆ ನಿರ್ದಿಷ್ಟ ಸೂಚನೆಗಳು ಇಲ್ಲದಿದ್ದರೂ, ನೀತಿ ಸಂಹಿತೆಯ ಕಟ್ಟುನಿಟ್ಟಿನ ಪಾಲನೆಯಲ್ಲಿ ಲೋಪಗಳಾಗಬಾರದೆಂಬ ಕಾರಣಕ್ಕೆ ಅಂದಿದ್ದ ಇಲಾಖೆ ಹಿರಿಯ ಅಧಿಕಾರಿಯೊಬ್ಬರು, ಅರ್ಹ ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಬೇರೆ,ಬೇರೆ ಸ್ಥಳಗಳಿಗೆ ವರ್ಗಾಯಿಸಿದ್ದರಂತೆ.
ಆಗ ನಡೆದಿದ್ದ ವರ್ಗಾವಣೆ ವೇಳೆ ಮತ್ತು ನೀತಿ ಸಂಹಿತೆ ಪೂರ್ಣಗೊಳ್ಳುತ್ತಿದ್ದಂತೆ ಮೂಲ ಸ್ಥಳಕ್ಕೆ ಮರಳುವಂಥ ಸನ್ನಿವೇಶದಲ್ಲಿ ಇಲಾಖೆಯ ಮತ್ತೊಬ್ಬ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ವ್ಯಾಪಕ ದೂರುಗಳು ಕೇಳಿ ಬಂದಿದ್ದವಂತೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತ್ತ ರಾಜ್ಯ ಸರ್ಕಾರ, ಈ ಬಾರಿ ನೀತಿ ಸಂಹಿತೆ ಕಾರಣಕ್ಕೆ ವರ್ಗಾವಣೆ ಆಗುತ್ತಿರುವ ಅಧಿಕಾರಿಗಳು, ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಸ್ವಸ್ಥಳಕ್ಕೆ ಮರಳಬೇಕೆಂದು ವರ್ಗಾವಣೆ ಆದೇಶದಲ್ಲಿ ತಿಳಿಸಿದೆಯಂತೆ.
ಎಲೆಕ್ಷನ್ ಕರ್ತವ್ಯದಲ್ಲಿ ನಮ್ಮ ಅಧಿಕಾರಿಗಳು ನೇರ ಭಾಗಿದಾರರಲ್ಲ ಎಂಬ ಕಾರಣವೊಡ್ಡಿ ಕರ್ನಾಟಕದ ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲಿ ಆಯೋಗದ ಮಾರ್ಗಸೂಚಿಯನ್ನು ಅಬಕಾರಿ ಇಲಾಖೆ ಪಾಲಿಸಿರಲಿಲ್ಲವಂತೆ. ಆದರೆ, ಈ ಬಾರಿ ಆಯೋಗದ ನೇರ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಧಿಕಾರಿಗಳ ವರ್ಗಾವಣೆ ಮಾಡಿದೆ.
ವಿವಿಧ ಇಲಾಖೆಗಳಲ್ಲಿ ನಡೆಯುವ ಸಾಮಾನ್ಯ ವರ್ಗಾವಣೆ ವೇಳೆಯಲ್ಲಿ ದೂರುಗಳು, ಭ್ರಷ್ಟಾಚಾರ ಆರೋಪಗಳು ಸರ್ವೆ ಸಾಮಾನ್ಯ. ಅಬಕಾರಿ ಇಲಾಖೆಯಲ್ಲಿ, ತಾತ್ಕಾಲಿಕ ವರ್ಗಾವಣೆ ವೇಳೆಯಲ್ಲೂ ಆಯಕಟ್ಟಿನ ಜಿಲ್ಲೆ/ಸ್ಥಳಕ್ಕೆ ತೆರಳಬೇಕು ಎಂದರೆ ಸಂಬಂಧಿಸಿದವರ ‘ಕೃಪಾಕಟಾಕ್ಷ’ ಅನಿವಾರ‌್ಯವೆಂಬ ಮಾತು ಇಲಾಖೆ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅಬಕಾರಿ ಇಲಾಖೆಯಲ್ಲಿ, ಬೆಂಗಳೂರು ಎಂದರೆ ಅತ್ಯಂತ ಆಯಕಟ್ಟಿನ ಸ್ಥಳವೆಂದೇ ಗುರುತಾಗಿದೆ. ಅಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆ ಇದ್ದರೂ ಅನೇಕ ಅಧಿಕಾರಿಗಳಿಗೆ ಅವರ ಸೇವಾವಧಿ ಪೂರ್ಣವಾಗುವವರೆಗೂ ಸಾಧ್ಯವಾಗುವುದೇ ಇಲ್ಲ ಎನ್ನುತ್ತಾರೆ ಹೆಸರು ಹೇಳಲು ಬಯಸದ ಇಲಾಖೆ ಹಿರಿಯ ಅಧಿಕಾರಿಯೊಬ್ಬರು.
*ಕೋಟ್
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಚುನಾವಣಾ ಆಯೋಗ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ನೇರವಾಗಿ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಹೆಸರು ಹೇಳಲು ಬಯಸದ ಅಬಕಾರಿ ಇಲಾಖೆ ಹಿರಿಯ ಅಧಿಕಾರಿ