ಜಿಲ್ಲೆ

ಫಸಲ್ ಬಿಮಾ ಯೋಜನೆಗೆ ನೋಂದಣಿ

ಲಲಾಟಾಕ್ಷ ಎಸ್

ಅರಕಲಗೂಡು: ಕೇಂದ್ರ ಮತ್ತು ರಾಜ್ಯ ಸರ್ಕಾರ 2025-26ನೇ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಠಾನಗೊಳಿಸಲು ಮಂಜೂರಾತಿ ದೊರೆತಿದ್ದು ರೈತರು ಇದರ ಪ್ರಯೋಜನ ಪಡೆಯುವಂತೆ ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ.ಕವಿತಾ ಕೋರಿದ್ದಾರೆ.

ಜಿಲ್ಲೆಯಲ್ಲಿ ಓರಿಯಂಟಲ್ ಜನರಲ್ ಇನ್ಶೂರೆನ್ಸ್ ಕಂಪನಿ ಸಹಯೋಗದೊಂದಿಗೆ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟಕ್ಕೆ ನೀರಾವರಿ ಭತ್ತ, ಮಳೆಯಾಶ್ರಿತ ರಾಗಿ ಹಾಗೂ ಹೋಬಳಿ ಮಟ್ಟದಲ್ಲಿ ಕಸಬಾ ಮತ್ತು ಕೊಣನೂರು ಹೋಬಳಿಯಲ್ಲಿ ಮಳೆಯಾಶ್ರಿತ ಅಲಸಂದೆ, ಮುಸುಕಿನ ಜೋಳ ಆಲೂಗಡ್ಡೆ ಮತ್ತು ನೀರಾವರಿ ಮುಸಕಿನ ಜೋಳ, ದೊಡ್ಡಮಗ್ಗೆ ಮತ್ತು ರಾಮನಾಥಪುರ ಹೋಬಳಿಯಲ್ಲಿ ಮಳೆಯಾಶ್ರಿತ ಅಲಸಂದೆ ಮತ್ತು ಆಲೂಗಡ್ಡೆ, ಮುಸುಕಿನ ಜೋಳ, ಮಲ್ಲಿಪಟ್ಟಣ ಹೋಬಳಿಯಲ್ಲಿ ಮಳೆಯಾಶ್ರಿತ ಆಲೂಗಡ್ಡೆ ಮತ್ತು ಮುಸುಕಿನ ಜೋಳ ಬೆಳೆಗಳನ್ನು ಬೆಳೆಯುವ ರೈತರು ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಬೆಳೆ ಸಾಲ ಪಡೆಯದ ಹಾಗೂ ಬೆಳೆ ಸಾಲ ಪಡೆದ ರೈತರು ನೋಂದಣಿ ಮಾಡಿಕೊಳ್ಳಬಹದು.

ನಿಗದಿತ ಅವಧಿಯೊಳಗೆ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಅರ್ಜಿಯೊಂದಿಗೆ ಅಗತ್ಯ ದಾಖಲೆಗಳೊಂದಿಗೆ ಸಾಮಾನ್ಯ ಸೇವಾ ಕೇಂದ್ರ, ಬ್ಯಾಂಕ್, ಕರ್ನಾಟಕ ಒನ್, ಗ್ರಾಮಒನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.