ಜಿಲ್ಲೆ

ಫಸಲು ರಾಶಿ ದಿಢೀರ್ ತೆರವಿಗೆ ಆಕ್ಷೇಪ

ಮುಂಡರಗಿ:ತಾಲೂಕಿನ ವಿವಿಧೆಡೆ ರೈತರು ರಸ್ತೆಗಳ ಮೇಲೆಯೇ ಬೆಳೆ ರಾಶಿ ಮಾಡುತ್ತಿದ್ದು, ರಸ್ತೆಗಳ ಮೇಲೆ ರಾಶಿ ಮಾಡುವುದನ್ನು ಕೈಬಿಡಬೇಕು. ಈಗಾಗಲೇ ಹಾಕಿರುವ ರಾಶಿಯನ್ನು ತೆರವುಗೊಳಿಸುವ ಕುರಿತು ತಹಸೀಲ್ದಾರ್ ಕಾರ್ಯಾಲಯದಲ್ಲಿ ತಹಸೀಲ್ದಾರ್ ಎರ‌್ರಿಸ್ವಾಮಿ ಪಿ.ಎಸ್. ಅಧ್ಯಕ್ಷತೆಯಲ್ಲಿ ಮಂಗಳವಾರ ರೈತ ಮುಖಂಡರ ಸಭೆ ಏರ್ಪಾಟಾಗಿತ್ತು.

ತಾಲೂಕಿನ ವಿವಿಧ ಭಾಗಗಳಲ್ಲಿ ಹಾಯ್ದು ಹೋಗಿರುವ ರಾಜ್ಯ ಹೆದ್ದಾರಿ, ಪಟ್ಟಣ ಮತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳ ಮೇಲೆ ರೈತರು ಒಕ್ಕಣೆ ಮಾಡುತ್ತಿದ್ದಾರೆ. ಕಾಳು, ಕಡಿಗಳನ್ನು ಒಣಗಿಸಲು ಭಾಗಶಃ ರಸ್ತೆಯನ್ನು ಬಳಸಿಕೊಳ್ಳುತ್ತಲಿದ್ದಾರೆ. ಇದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ನ.16, 17 ಹಾಗೂ 18ರಂದು ಹೈಕೋರ್ಟ್ ನ್ಯಾಯಾಧೀಶರು ತಾಲೂಕಿಗೆ ಭೇಟಿ ನೀಡಲಿದ್ದು, ಅಷ್ಟರೊಳಗಾಗಿ ರೈತರು ತಮ್ಮ ರಾಶಿಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ, ರೈತರಿಗೆ ರಾಶಿ ಮಾಡಲು ಕಣದ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳ ಮೇಲೆ ಮಾಡಿಕೊಳ್ಳುತ್ತಾರೆ. ವಿಪರೀತ ಮಳೆ ಸುರಿದದ್ದರಿಂದ ತಮ್ಮ ಫಸಲನ್ನು ರಕ್ಷಿಸಿಕೊಳ್ಳಲು ರಸ್ತೆಗಳ ಮೇಲೆ ಹಾಕುತ್ತಾರೆ. ಈಗ ದಿಢೀರ್‌ನೆ ರಸ್ತೆಯ ಮೇಲಿನ ರಾಶಿಗಳನ್ನು ತೆರವುಗೊಳಿಸಲು ಸೂಚಿಸಿದರೆ ರೈತರಿಗೆ ತೊಂದರೆಯಾಗುತ್ತದೆ. ಆದ್ದರಿಂದ ರೈತರಿಗೆ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಭಾಗಗಳಲ್ಲಿ ಒಕ್ಕಲು ಹಾಗೂ ರಾಶಿ ಮಾಡುವುದು ರೈತರಿಗೆ ಸವಾಲಿನ ಕೆಲಸವಾಗಿದೆ. ಮಳೆಗಾಲದಲ್ಲಿ ತೀರ ತೊಂದರೆ. ಸರ್ಕಾರದಿಂದ ಪ್ರತಿ ಗ್ರಾಮದಲ್ಲಿರುವ ಸರ್ಕಾರಿ ಗೌಟಾನ್ ಜಾಗದಲ್ಲಿ 4-5 ಎಕರೆ ಪ್ರದೇಶದಲ್ಲಿ ಗುಣಮಟ್ಟದ ಕಣವನ್ನು ನಿರ್ಮಿಸಿಕೊಡಬೇಕು. ಇಲ್ಲದಿದ್ದರೆ ರೈತರ ಸಮಸ್ಯೆ ದೂರವಾಗುವುದಿಲ್ಲ. ತಕ್ಷಣ ಇದಕ್ಕೆ ಸೂಕ್ತ ಪರಿಹಾರ ತಾವು ಕಲ್ಪಿಸಿಕೊಡಬೇಕು ಎಂದು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ ಮನವಿ ಮಾಡಿದರು.

ಗ್ರಾಮಗಳಲ್ಲಿ ಕಣ ನಿರ್ಮಿಸಿಕೊಡಲು ಸೂಕ್ತ ಜಾಗ ಗುರುತಿಸಿದರೆ ಅದನ್ನು ಪರಿಶೀಲಿಸಿ ಸರ್ಕಾರದಿಂದ ಕಣ ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು. ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದರು.

ಪಿಎಸ್‌ಐ ವಿ.ಜಿ. ಪವಾರ, ರೈತ ಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಜಾಯನಗೌಡ್ರ, ಶರಣಪ್ಪ ಕಂಬಳಿ, ಪ್ರಕಾಶ ಸಜ್ಜನರ, ರವಿ ಕೊಳಲು, ಚಂದ್ರಕಾಂತ ಉಳ್ಳಾಗಡ್ಡಿ, ಅಶ್ವಿನಿ ಗೌಡರ, ಜ್ಯೋತಿ ಹಡಪದ, ರಾಘವೇಂದ್ರ ಕುರಿ, ಲಕ್ಷ್ಮಣ ಗಾಜಿ, ಸಂಗನಗೌಡ ಪಾಟೀಲ, ಬಸಪ್ಪ ವಡ್ಡರ, ಈರಣ್ಣ ಹಂಚಿನಾಳ, ಚಿನ್ನಪ್ಪ ವಡ್ಡಟ್ಟಿ, ಬಸವರಾಜ ಇಟಗಿ, ಸೋಮಶೇಖರ ಹಿರೇಮಠ, ಶರಣಪ್ಪ ಚನ್ನಳ್ಳಿ, ಮಂಜುಪ್ಪ ಜೋಳದ, ಚಂದ್ರಪ್ಪ ಗದ್ದಿ, ಅಶೋಕ ಬನ್ನಿಕೊಪ್ಪ, ಎಸ್.ಎಸ್. ಬಿಚ್ಚಾಲಿ, ಕೃಷಿ, ಲೋಕೋಪಯೋಗಿ ಹಾಗೂ ಎಪಿಎಂಸಿ ಇಲಾಖೆ ಅಧಿಕಾರಿಗಳು ಇದ್ದರು.