ಜಿಲ್ಲೆ

ಫಸಲು ಇಲ್ಲದ ಪೈರು; ರೈತರು ಕಂಗಾಲೂ.!

ಬೇಲೂರು: ಕಷ್ಟಪಟ್ಟು ಬೆಳೆದ ಪೈರು ಕೈಗೆ ಬಂತು ಎನ್ನುವಷ್ಟರಲ್ಲೆ ಪೈರಿನಲ್ಲಿ ಫಸಲು ಇಲ್ಲದಿರುವುದು ಕಂಡು ಕಂಗಾಲಾಗಿ, ಬಿತ್ತನೆ ಬೀಜ ತಯಾರಿಸಿದ ಖಾಸಗಿ ಕಂಪನಿ ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸಿರುವ ಘಟನೆ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ.


ಕಳೆದ ಕೆಲ ತಿಂಗಳ ಹಿಂದೆ ಉತ್ತಮವಾಗಿ ಬಂದ ಮಳೆಗೆ ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಸಾಕಷ್ಟು ರೈತರು ಖಾಸಗಿ ಕಂಪನಿಯ ಅನ್ನಪೂರ್ಣ ಎಂಬ ಭತ್ತದ ಬಿತ್ತನೆ ಬೀಜ ಖರೀದಿಸಿ ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಆದರೆ ಈಗ ಬೆಳೆ ಬೆಳೆದು ಕೊಯ್ಲಿಗೆ ಬಂದ ಸಂದರ್ಭ ಕಠಾವಿಗೆ ಮುಂದಾದರೆ ಭತ್ತದ ಪೈರಿನಲ್ಲಿ ಫಸಲೆ ಇಲ್ಲದಿರುವುದು ನೋಡಿ ರೈತರು ಕಂಗಾಲಾಗಿದ್ದಾರೆ. ಆದರೆ ತಾವು ಈ ಹಿಂದೆ ಖಾಸಗಿ ಕಂಪನಿಯ ಅನ್ನಪೂರ್ಣ ಹೆಸರಿನ ಭತ್ತವನ್ನು ಬೇಲೂರಿನ ಖರೀದಿಸಿದ್ದ ಖಾಸಗಿ ಅಂಗಡಿಗೆ ಹೋಗಿ ಅವರಿಂದ ಉಡಾಫೆ ಉತ್ತರ ಬಂದಿದೆ. ಇದರಿಂದ ಆಕ್ರೋಶಗೊಂಡ ರೈತರು ನಷ್ಟವನ್ನು ಬರಿಸಿಕೊಡುವಂತೆ ಅಂಗಡಿ ಮಾಲೀಕರನ್ನು ಕೇಳಿದ್ದಾರೆ. ಆದರೆ ಅಂಗಡಿ ಮಾಲೀಕ ನೀವು ಬೇಕಿದ್ದರೆ ಕಂಪನಿ ವಿರುದ್ಧ ನ್ಯಾಯಾಲಯಕ್ಕೆ ಹೋಗಿ ನಾವು ಏನು ಮಾಡಲು ಬರುವುದಿಲ್ಲ ಎಂದು ಉಡಾಫೆಯಿಂದ ವರ್ತಿಸಿದ್ದಾರೆ. ಇದರಿಂದ ಬೇಸತ್ತ ರೈತರು ನೇರವಾಗಿ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಅಂಗಡಿಯವರ ವಿರುದ್ಧ ದೂರು ನೀಡಿದ್ದಾರೆ. ಯಾವುದೇ ತಪ್ಪಿಲ್ಲದಿದ್ದರೂ ರೈತರು ಹಣ ಕೊಟ್ಟು ತಂದ ಅನ್ನಪೂರ್ಣ ಬ್ರಾಂಡ್‌ನ ಭತ್ತದ ಬಿತ್ತನೇ ಬೀಜ ಕೊಂಡ ತಪ್ಪಿಗೆ ಜಮೀನಿನಲ್ಲಿ ಬೆಳೆದಿರುವ ಬೆಳೆ ಕೈಗೆ ಬಂದರೂ ಬಾಯಿಗೆ ಬಾರದಂತ್ತಾಗಿದ್ದು, ರೈತರ ಗೋಳು ಮತ್ತು ಆಕ್ರೋಶ ಹೇಳ ತೀರದಾಗಿದೆ. ಖಾಸಗಿ ಕಂಪನಿಯ ಬಿತ್ತನೆ ಬೀಜಗಳನ್ನು ಬಲ್ಲೇನಹಳ್ಳಿ ಗ್ರಾಮದ ಸಿದ್ದೇಶಪ್ಪ, ರಾಜಪ್ಪ, ವಿರೂಪಾಕ್ಷ, ಈಶ್ವರಪ್ಪ, ಬಸವರಾಜ್, ಮಂಜಪ್ಪ, ಸಂಗನಯ್ಯ, ಸತೀಶ್, ಪುಟ್ಟಸ್ವಾಮಿ, ಗಂಗಯ್ಯ, ಚಂದ್ರೇಗೌಡ, ಗಂಗಮ್ಮ, ಗೌರಮ್ಮ ಸೇರಿದಂತೆ 20 ಕ್ಕೂ ಹೆಚ್ಚಿನ ರೈತರು ಬೆಳೆ ನಷ್ಟ ಹೊಂದಿ ನೋವು ಅನುಭವುತಿದ್ದಾರೆ. ಆದರೆ ಇಷ್ಟೆಲ್ಲ ಬೆಳವಣಿಗೆಗಳು ನಡೆದು ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದರೂ ಇನ್ನೂ ಯಾವುದೆ ಕ್ರಮ ಕೈಗೊಳ್ಳದೆ ಇರುವುದು ನೋಡಿದರೆ ಅಧಿಕಾರಿಗಳಿಗೆ ರೈತರ ಮೇಲಿರುವ ಪ್ರೀತಿ ಎದ್ದು ಕಾಣುತ್ತಿದೆ. ಆದ್ದರಿಂದ ಸಂಬಂಧಿಸಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಜಮೀನಿನಲ್ಲಿ ಬೆಳೆದಿರುವ ಬೆಳೆ ಪರಿಶೀಲಿಸಿ ಖಾಸಗಿ ಕಂಪನಿಯೊಂದಿಗೆ ಮಾತುಕತೆ ನಡೆಸಿ ರೈತರಿಗಾಗಿರುವ ನಷ್ಟವನ್ನು ಬರಿಸಿಕೊಡುವ ಮೂಲಕ ನ್ಯಾಯ ಒದಗಿಸಬೇಕು ಎಂಬುದು ನಷ್ಟಕ್ಕೊಳಗಾದ ಬಲ್ಲೇನಹಳ್ಳಿ ಗ್ರಾಮದ ರೈತರ ಆಗ್ರಹವಾಗಿದೆ.


ಬಲ್ಲೇನಹಳ್ಳಿ ಗ್ರಾಮದ ರೈತ ಸಿದ್ದೇಶಪ್ಪ ಮಾತನಾಡಿ, ಉತ್ತಮ ಮಳೆಯಿಂದ ಕೆರೆ ಕಟ್ಟೆಗಳು ಭರ್ತಿಯಾದ ಹಿನ್ನೆಲೆಯಲ್ಲಿ ಕಳೆದ ಬಾರಿ ಸಾಕಷ್ಟು ಜನರು ಭತ್ತ ಬೆಳೆಯಬೇಕೆಂದು 20ಕ್ಕೂ ಹೆಚ್ಚು ರೈತರು ಬೇಲೂರು ಪಟ್ಟಣದ ಖಾಸಗಿ ಅಂಗಡಿಯಲ್ಲಿ ಖಾಸಗಿ ಪಂಪನಿಯ ಅನ್ನಪೂರ್ಣ ಬ್ರಾಂಡ್‌ನ ಭತ್ತದ ತಳಿ ತೆಗೆದುಕೊಳ್ಳುವ ಸಂದರ್ಭ ಅಂಗಡಿ ಮಾಲೀಕ ಈ ಬ್ರಾಂಡು ಉತ್ತಮ ಫಸಲು ಕೊಡುತ್ತದೆ ಎಂದಿದ್ದರು. ಆದರೆ ಈಗ ನಾವು ಏನು ಮಾಡಲು ಸಾದ್ಯವಿಲ್ಲ, ನೀವು ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ ಎನ್ನುತ್ತಾರೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ಅವರು ನಾವು ಕೊಟ್ಟ ದೂರು ಸ್ವೀಕರಿಸಿ ಮೂರು ದಿನದಲ್ಲಿ ಸಂಬಂಧಿಸಿದ ಕೃಷಿ ವಿಜ್ಞಾನಿಗಳನ್ನು ಕರೆಸಿ ಸಮಸ್ಯೆ ಬಗೆಹರಿಸುವ ವಿಶ್ವಾಸವನ್ನು ವ್ಯಕ್ತ ಪಡಿಸಿ, ವಿಜ್ಞಾನಿಗಳು ಕಳಪೆ ಬಿತ್ತನೆ ಬೀಜ ಎಂದು ಪ್ರಯಾಣ ಪತ್ರ ನೀಡಿದರೆ ರೈತರು ಯಾವುದೇ ಮೂಲಾಜು ಇಲ್ಲದೆ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹಾಕಿ ಪರಿಹಾರ ಪಡೆಯಬಹುದು ಎಂದಿದ್ದಾರೆ. ನಮಗೆ ನ್ಯಾಯ ಬೇಕು ಪ್ರತಿ ಎಕರೆ ಭತ್ತ ನಾಟಿ ಮಾಡಲು 25 ಸಾವಿರ ರೂ, ಭರಿಸಬೇಕಿದೆ. ಇದರೊಂದಿಗೆ ಕಾರ್ಮಿಕರ ಕೂಲಿ, ರಸಗೊಬ್ಬರ ಹೀಗೆ ವೆಚ್ಚ ಮಾಡಿದ ಹಣವನ್ನು ಪರಿಹಾರ ರೂಪದಲ್ಲಿ ಕೊಡಬೇಕು ಇಲ್ಲದಿದ್ದರೆ ಕಚೇರಿ ಹಾಗೂ ಅಂಗಡಿ ಮಾಲೀಕರ ವಿರುದ್ಧ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.


ಹೇಳಿಕೆ: ತಾಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ರೈತರು ಬೆಳೆದ ಭತ್ತ ಫಸಲು ಬಿಡದೆ ಜೊಳ್ಳು ಜೊಳ್ಳಾಗಿದೆ ಎಂದು ರೈತರು ಖಾಸಿಗಿ ಅಂಗಡಿ ಮಾಲೀಕರ ವಿರುದ್ಧ ದೂರು ನೀಡಿದ್ದಾರೆ. ಆದ್ದರಿಂದ ಇದು ಕಳೆಯೋ ಇಲ್ಲವೊ ಎಂಬುದನ್ನು ಪರಿಶೀಲಿಸಲು ಇಲಾಖೆಯ ವಿಜ್ಞಾನಿಗಳ ತಂಡ ಕಳುಹಿಸುವಂತೆ ರೆಫರ್ ಮಾಡಿದ್ದೇವೆ. ಅವರು ಇವತ್ತು ಅಥವಾ ನಾಳೆ ಬರುವ ನೀರೀಕ್ಷೆ ಇದ್ದು, ಅವರು ಬಂದ ನಂತರ ಸ್ಥಳಕ್ಕೆ ಭೇಟಿನೀಡಿ, ವಿಜ್ಞಾನಿಗಳು ಕಳಪೆ ಎಂದು ವರದಿ ಕೊಟ್ಟಲ್ಲಿ ರೈತರು ಗ್ರಾಹಕರ ನ್ಯಾಯಾಲಯದಲ್ಲಿ ದಾವೇ ಹೂಡಿ ಪರಿಹಾರ ಪಡೆಯ ಬಹುದಾಗಿದೆ. ಜತೆಗೆ ರೈತರು ಇಲಾಖೆಯಲ್ಲಿ ಬೆಳೆ ವಿಮೆ ಮಾಡಿಸಿದ್ದರೆ ಇಲಾಖೆಯಿಂದಲೂ ಪರಿಹಾರ ಪಡೆಯಬಹುದಾಗಿದೆ.:-ಶಶಿಧರ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ ಬೇಲೂರು

ವರ್ಷವಿಡಿ ಕಷ್ಟಪಟ್ಟು ಬೆಳೆದ ಭತ್ತ, ಕಟಾವಿ ಬಂದ ಸಂಪೂರ್ಣ ಫಸಲು ಕೂಡ ಜೋಳ್ಳು ಕಂಡು ದಿಕ್ಕು ಕಾಣದ ಕೃಷಿಕರು ಖಾಸಗಿ ಅಂಗಡಿ ಬಳಿ ತಮ್ಮ ಗೋಳು ಹೇಳಲು ಬಂದ ರೈತರಿಗೆ ಅಂಗಡಿ ಮಾಲೀಕ ಉಡಾಪೆಯಿಂದ ವರ್ತಿಸಿರುವ ಘಟನೆ ಬೇಲೂರಿನಲ್ಲಿ ನಡೆದಿದೆ.
ಬೇಲೂರು ತಾಲ್ಲೂಕಿನ ಇಬ್ಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಬಲ್ಲೇನಹಳ್ಳಿ ಗ್ರಾಮದ 20 ಕ್ಕೂ ಹೆಚ್ಚಿನ ರೈತರು ಈ ಭಾರಿಯ ಉತ್ತಮ ಮಳೆಯಿಂದ ಇರುವ ಅಲ್ಪ-ಸ್ವಲ್ಪ ಗೆದ್ದೆಯಲ್ಲಿ ಭತ್ತವನ್ನು ನಾಟಿ ಮಾಡುವ ದಿಸೆಯಲ್ಲಿ ಬೇಲೂರು ಪಟ್ಟಣದ ನ್ಯಾಷನಲ್ ಸ್ಟೊರ್ಸ್ನಲ್ಲಿ ವಿಎನ್‌ಆರ್ ಖಾಸಗಿ ಕಂಪನಿಯ ಅನ್ನಪೂರ್ಣ ಎಂಬ ಭತ್ತದ ಬಿತ್ತನೆಯನ್ನು ಖರೀದಿಸಿ ಸದ್ಯ ಬಿತ್ತನೆ,ನಾಟಿ ಮುಗಿದು ಈಗಾಗಾಲೇ ಕಟಾವಿಗೆ ಬಂದ ಸಂದರ್ಭದಲ್ಲಿ ಭತ್ತದ ತಳಿಯ ಅಸಲಿ ಮುಖ ಬಹಿರಂಗವಾಗಿದೆ. ಎಕ್ಕರೆಗೆ 30 ಚೀಲ ಫಸಲು ಲೆಕ್ಕಾಚಾರ ಉಲ್ಟವಾಗಿ ಸದ್ಯ ಒಂದು ಅಥಾವ ಎರಡು ಚೀಲ ಭತ್ತವಾಗಿದೆ, ಇದ್ದರಿಂದ ಗಾಂಬರಿಯಾದ ರೈತರು ನ್ಯಾಷನಲ್ ಸ್ಟೊರ್ಸ್‌ ಅಂಗಡಿ ಮಾಲೀಕರನ್ನು ಕೇಳಿದ ಸಂದರ್ಭದಲ್ಲಿ ಅವರು ನೀವು ನ್ಯಾಯಾಲಯಕ್ಕೆ ಹೋಗಿ ನಾನು ಏನು ಮಾಡಲು ಸಾದ್ಯವಿಲ್ಲ ಎಂದಿದ್ದಾರೆ. ಈಗಾಗಲೇ ಗ್ರಾಮಸ್ಥರು ಒಟ್ಟಾಗಿ ಸೇರಿ ಬೇಲೂರು ಕೃಷಿ ನಿರ್ದೇಶಕರಾದ ಶಶಿಧರ್ ಅವರನ್ನು ಕೂಡ ಭೇಟಿ ಮಾಡಿದ್ದು, ಖಾಸಗಿ ಕಂಪನಿ ವಿರುದ್ದ ಕ್ರಮಕೈಗೊಳ್ಳಬೇಕು ಎಂದು ದೂರು ನೀಡಿದ್ದಾರೆ.