ಜಿಲ್ಲೆ

ಫಲಿತಾಂಶ ಸೃಷ್ಟಿಸಿದ ಸಂಚಲನ

ಬೆಳಗಾವಿ: ಲೋಕಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಗೆಲುವು ಸಾಧಿಸಿದ್ದಾರೆ. ಆದರೆ, ಫಿನಿಕ್ಸ್ ಹಕ್ಕಿಯಂತೆ ಎದ್ದು ಬಂದ ಕಾಂಗ್ರೆಸ್, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಕ್ಷೇತ್ರದಲ್ಲೀಗ ಹೊಸ ಸಂಚಲನ ಸೃಷ್ಟಿಸಿದೆ. ದಿನ ಬಳಕೆ ವಸ್ತುಗಳ ಬೆಲೆ ಏರಿಕೆ, ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು, ಮಾಜಿ ಸಚಿವ ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣದ ಸಂದರ್ಭದಲ್ಲೇ ಬೆಳಗಾವಿ ಲೋಕಸಭಾ ಉಪ ಚುನಾವಣೆ ಜರುಗಿತ್ತು. ಭಾನುವಾರ ಹೊರಬಿದ್ದ ಫಲಿತಾಂಶ ಹಲವು ಹೊಸ ದಾಖಲೆಗಳಿಗೆ ಸಾಕ್ಷಿಯಾಗಿದೆ.

ಎಂಇಎಸ್‌ಗೆ ಮರುಜೀವ: ಭಾಷೆ ಹೆಸರಲ್ಲಿ ನಾಡವಿರೋಧಿ ಚಟುವಟಿಕೆ ಕೈಗೊಳ್ಳುತ್ತಲೇ ಬಂದಿರುವ ಎಂಇಎಸ್ ನಾಯಕತ್ವ ಕೊರತೆಯಿಂದ ತತ್ತರಿಸಿತ್ತು. ತನ್ನ ಅಸ್ತಿತ್ವ ಉಳಿಸಿಕೊಳ್ಳಲೂ ಆಗದ ಸ್ಥಿತಿಗೆ ಬಂದಿತ್ತು. ಆದರೆ, ಲೋಕಸಭಾ ಉಪ ಚುನಾವಣೆ ಎಂಇಎಸ್‌ಗೆ ಮರುಜೀವ ನೀಡಿದೆ. ಮತ್ತೊಂದೆಡೆ, ಚುನಾ ವಣೆಯಲ್ಲಿ ನಿರಂತರ ಸೋಲು ಅನುಭವಿ ಸುತ್ತಲೇ ಬರುತ್ತಿದ್ದ ಕಾಂಗ್ರೆಸ್ ಪಡೆಯಲ್ಲೂ ಈ ಚುನಾವಣೆ ಗೆಲುವಿನ ಭರವಸೆ ಹುಟ್ಟಿಸಿದೆ. ಅಲ್ಲದೆ, ಕಳೆದ 20 ವರ್ಷಗಳಿಂದ ಬೆಳಗಾವಿಯನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿಗೆ ಈ ಉಪ ಚುನಾವಣೆಯಲ್ಲಿ ಮತದಾರರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ದಂಗಾದ ರಾಷ್ಟ್ರೀಯ ಪಕ್ಷಗಳು: ಕಳೆದ ಹಲವು ದಶಕಗಳಿಂದ ಭಾಷಾ ಹೆಸರಿನಲ್ಲಿ ವಿವಾದದ ಮೂಲಕವೇ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿದ್ದ ಎಂಇಎಸ್, 2018ರಿಂದ ನಾಯಕತ್ವ ಕೊರತೆ, ಒಳಜಗಳ ಇನ್ನಿತರ ಕಾರಣಗಳಿಂದ ಕಂಗೆಟ್ಟಿತ್ತು. ಈ ಮಧ್ಯೆ ಬದಲಾದ ರಾಜಕೀಯ ವಿದ್ಯಮಾನಗಳಿಂದ ಮಹಾರಾಷ್ಟ್ರದ ಶಿವಸೇನೆ ಮತ್ತು ಬೆಳಗಾವಿ ಮರಾಠಿ ನಾಯಕರು ಒಗ್ಗೂಡಿ ಸಮಾಲೋಚನೆ ನಡೆಸಿ, ಶುಭಂ ಶೆಳಕೆ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು. ಅವರು ಗರಿಷ್ಠ 20 ಸಾವಿರ ಮತ ಗಳಿಸಬಹುದು ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗಿತ್ತು. ಆದರೆ, ಶುಭಂ ಶೆಳಕೆ, 1,17,174 ಮತ ಗಳಿಸುವ ಮೂಲಕ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನೇ ತಲೆ ಕೆಳಗಾಗಿಸಿದ್ದಾರೆ. ಅಲ್ಲದೆ, ರಾಷ್ಟ್ರೀಯ ಪಕ್ಷಗಳ ದಿಗ್ಗಜರು ದಂಗಾಗುವಂತೆ ಅಚ್ಚರಿ ಮೂಡಿಸಿದ್ದಾರೆ.

6 ಕ್ಷೇತ್ರಗಳಲ್ಲಿ ಕೈ ಪಡೆಗೆ ಮುನ್ನಡೆ: ಈ ಹಿಂದೆ ನಡೆದ ನಾಲ್ಕು ಲೋಕಸಭಾ ಚುನಾವಣೆಗಳಲ್ಲೂ ಬಿಜೆಪಿಗೆ ಮರಾಠಿ ಭಾಷಿಕರೆಲ್ಲ ಬೆಂಬಲಕ್ಕೆ ನಿಲ್ಲುತ್ತಿದ್ದರು. ಹೀಗಾಗಿ, ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುತ್ತಲೇ ಇದ್ದರು. ಬೆಳಗಾವಿ ದಕ್ಷಿಣ, ಉತ್ತರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಮತ ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾಗುತ್ತಿತ್ತು. ಆದರೆ, ಈ ಬಾರಿ ಉಪ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ 6 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 18 ವರ್ಷದ ಬಳಿಕ ಮುನ್ನಡೆ ಸಾಧಿಸಿದೆ.

ಮಹಾನಗರ ಪಾಲಿಕೆ ಮೇಲೆ ಶಿವಸೇನೆ ಕಣ್ಣು

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲಿತ ಅಭ್ಯರ್ಥಿ 1 ಲಕ್ಷಕ್ಕಿಂತ ಹೆಚ್ಚು ಮತ ಗಳಿಸಿದ್ದರಿಂದ ಮಹಾರಾಷ್ಟ್ರದ ಆಡಳಿತಾರೂಢ ಶಿವಸೇನೆ ಇದೀಗ ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ಮತ್ತೆ ಕಣ್ಣಿಟ್ಟಿದೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದು, ಪಾಲಿಕೆಯ 58 ವಾರ್ಡ್ ಪೈಕಿ ಮರಾಠಿಗರ ಪ್ರಾಬಲ್ಯ ಹೊಂದಿರುವ 38 ವಾರ್ಡ್‌ಗಳಲ್ಲಿ ಎಂಇಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲು ನಿರ್ಧರಿಸಿದೆ. ಅಲ್ಲದೆ, ಚುನಾವಣೆಯ ಸಂಪೂರ್ಣ ಖರ್ಚು-ವೆಚ್ಚವನ್ನೂ ಭರಿಸಲು ಶಿವಸೇನೆ ಜವಾಬ್ದಾರಿ ವಹಿಸಿಕೊಂಡಿದೆ ಎನ್ನಲಾಗುತ್ತಿದೆ. ಆದರೆ, ಎಂಇಎಸ್‌ನ ಹಿರಿಯ ನಾಯಕರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾಲಿಕೆ ಚುನಾವಣೆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ಎಂಇಎಸ್ ಕಾರ್ಯಕರ್ತರು ತಿಳಿಸಿದ್ದಾರೆ.

| ಮಂಜುನಾಥ ಕೋಳಿಗುಡ್ಡ ಬೆಳಗಾವಿ

ಕಮಲ, ಕೈ ಪಡೆಯಲ್ಲಿ ಶುರುವಾದ ಆತಂಕ
ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಳಗಾವಿ ದಕ್ಷಿಣ, ಉತ್ತರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಮರಾಠಿಗರು ಅಧಿಕ ಸಂಖ್ಯೆಯಲ್ಲಿದ್ದಾರೆ. ಆದರೆ, ಕಳೆದು ಎರಡು ಚುನಾವಣೆಯಲ್ಲಿ ಮರಾಠಿಗರಲ್ಲಿ ಉಂಟಾದ ಒಡಕಿನಿಂದಾಗಿ ಅವರ ಮತಗಳೂ ಬಿಜೆಪಿ-ಕಾಂಗ್ರೆಸ್ ಪಾಲಾಗಿದ್ದವು. ಆದರೆ, ಇದೀಗ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರದಲ್ಲಿ ಮರಾಠಿಗರು ಎಂಇಎಸ್ ಬೆಂಬಲಿತ ಅಭ್ಯರ್ಥಿಯನ್ನೇ ಬೆಂಬಲಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಇದರಿಂದಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಲ್ಲಿ ಆತಂಕ ಸೃಷ್ಟಿಯಾಗಿದೆ.