ಜಿಲ್ಲೆ

ಫಲಿತಾಂಶ ಕಡಿಮೆಯಾದಲ್ಲಿ ವಾರ್ಡನ್‍ಗಳೇ ಜವಾಬ್ದಾರಿ

ಬಾಗಲಕೋಟೆ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ವಸತಿ ನಿಲಯಗಳ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಫಲತಾಂಶ ಕಡಿಮೆಯಾದಲ್ಲಿ ವಾರ್ಡನ್‍ಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಜರುಗಿದ ಸಮಾನ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳ ಪ್ರಗತಿ ಪರಿಶೀಲನಾ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರಕಾರ ವಸತಿ ನಿಲಯಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ ಫಲಿತಾಂಶ ಮಾತ್ರ ಕಡಿಮೆಯಾಗುತ್ತಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ವಸತಿ ನಿಲಯದ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ಯಾವುದೇ ವಿದ್ಯಾರ್ಥಿಗಳು ತೆರ್ಗಡೆ ಹೊಂದಬಾರದು ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆ ಹಾಗೂ ನಿಲಯಗಳ ವಿದ್ಯಾರ್ಥಿಗಳ ಕಳೆದ 2023ರ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಶೇ.85.38 ಹಾಗೂ ಪಿಯುಸಿ ಶೇ.88.35 ರಷ್ಟು ಅದೇ ರೀತಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆ ಹಾಗೂ ವಸತಿ ನಿಲಯಗಳ ವಿದ್ಯಾರ್ಥಿಗಳ ಎಸ್.ಎಸ್.ಎಲ್.ಸಿ ಫಲಿತಾಂಶ ಶೇ.84.71 ರಷ್ಟು ಹಾಗೂ ಪಿಯುಸಿ ಫಲಿತಾಂಶ ಶೇ.92.87 ರಷ್ಟು ಆಗಿರುತ್ತದೆ. ನೂರಕ್ಕೆ ನೂರರಷ್ಟು ಫಲಿತಾಂಶ ಏಕೆ ಆಗುತ್ತಿಲ್ಲವೆಂದು ಪ್ರಶ್ನಿಸಿದರು. ಫಲಿತಾಂಶ ಸುಧಾರಣೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಹಿಡಿದು ವಸತಿ ಶಾಲೆ ಮುಖ್ಯೋಪಾದ್ಯಾಯರು, ಪ್ರಾಚಾರ್ಯರು, ನಿಲಯಗಳ ವಾರ್ಡನ್‍ಗಳು ಕ್ರಮವಹಿಸಲು ಸೂಚಿಸಿದರು.

ವಸತಿ ನಿಲಯಗಳ ವಾರ್ಡನಗಳ ಪಾತ್ರ ಮುಖ್ಯವಾಗಿದ್ದು, ನಿಲಯದ ವಿದ್ಯಾರ್ಥಿಗಳು ಬೆಳಗಿನ 2 ಗಂಟೆ ಹಾಗೂ ಸಂಜೆ 3 ಗಂಟೆಗಳ ಕಾಲ ಓದುವ ಹವ್ಯಾಸ ಬೆಳೆಸಬೇಕು. ವಿದ್ಯಾರ್ಥಿಗಳ ಗುಣಮಟ್ಟ ಪರಿಶೀಲನೆಗೆ ಶಾಲೆ-ಕಾಲೇಜುಗಳ ಭೇಟಿ ನೀಡಬೇಕು. ಅಂದಾಗ ಮಾತ್ರ ವಿದ್ಯಾರ್ಥಿಗಳ ಬಗ್ಗೆ ತಿಳಿಯಲು ಸಾಧ್ಯವಾಗುತ್ತದೆ. ಅಧಿಕಾರಿಗಳು ಸಹ ಕಾಲಕಾಲಕ್ಕೆ ವಸತಿ ನಿಲಯಕ್ಕೆ ಭೇಟಿ ನೀಡಬೇಕು. ಇದರ ಜೊತೆಗೆ ನಿಲಯಗಳಿಗೆ ನೇಮಿಸಲಾದ ನೋಡಲ್ ಅಧಿಕಾರಿಗಳು ಸಹ ತಮಗೆ ನೀಡಿದ ಕಾರ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಲು ತಿಳಿಸಿದರು. ಪ್ರತಿಯೊಂದು ವಸತಿ ನಿಲಯಗಳಲ್ಲಿ ಗ್ರಂಥಾಲಯ ಇರುವಂತೆ ಕ್ರಮವಹಿಸಲು ಸೂಚಿಸಿದರು.

ಸಮಾಜ ಕಲ್ಯಾಣ ವ್ಯಾಪ್ತಿಯಲ್ಲಿ ಒಟ್ಟು 74 ವಸತಿ ನಿಲಯಗಳು ಬರುತ್ತಿದ್ದು, ವಿದ್ಯಾರ್ಥಿಗಳ ದಾಖಲಾತಿ ನವೀಕರಣ ಪೂರ್ಣಗೊಳ್ಳಬೇಕು. ಅಲ್ಲದೇ ಹೊರಗುತ್ತಿದೆ ನೌಕರರಿಗೆ ಸರಿಯಾಗಿ ಪಾವತಿಯಾಗುತ್ತಿಲ್ಲದಿರುವುದು ಕಂಡುಬಂದಿದೆ. ಅನುದಾನ ಬರುವುದು ತಡವಾದರೆ ಏಜೆನ್ಸಿಯವರೇ ಮುಂಗಡವಾಗಿ ಪಾವತಿ ಮಾಡಬೇಕು. ಸದರಿ ನೌಕರರ ಪಿಎಪ್ ಮತ್ತು ಇಎಸ್‍ಐ ಕಡ್ಡಾಯವಾಗಿ ಕಡಿತಗೊಳಿಸಿ ಪಾವತಿಸಬೇಕು. ಇಲ್ಲವಾದಲ್ಲಿ ಅಂತಹ ಏಜೇನ್ಸಿಗಳನ್ನು ಬ್ಲಾಕ್ ಲಿಸ್ಟನಲ್ಲಿ ಇಡುವುದಾಗಿ ಎಚ್ಚರಿಕೆ ನೀಡಿದರು. ಕಾರ್ಮಿಕ ಅಧಿಕಾರಿ ರಮೇಶ ಸಾಂಬಡ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರೆ, ಪಿಎಫ್, ಇಎಸ್‍ಐಗೆ ಸಂಬಂಧಿಸಿದ ಸೌಲಭ್ಯಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ವಿವರವಾಗಿ ತಿಳಿಸಿಕೊಟ್ಟರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸದಾಶಿವ ಬಡಿಗೇರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತುಂಬರಮಟ್ಟಿ ಸೇರಿದಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ತಾಲೂಕಾ ಅಧಿಕಾರಿಗಳು ಹಾಗೂ ವಸತಿ ನಿಲಯಗಳ ಮೇಲ್ವಿಚಾರಕರು, ಹೊರಗುತ್ತಿಗೆ ನೌಕರರ ಏಜೇನ್ಸಿ ಪ್ರತಿನಿಧಿಗಳು ಉಪಸ್ಥಿತರಿದ್ದರು