ಕಂಪ್ಲಿ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಸಮನ್ವಯ ಸಾಧಿಸಬೇಕೆಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಕೆ.ಶ್ರೀನಿವಾಸರಾವ್ ಹೇಳಿದರು.
ಪಟ್ಟಣದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು. ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳು ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯದಂತೆ ಜಾಗ್ರತೆ ತೋರಬೇಕೆಂದು ಸಲಹೆ ನೀಡಿದರು.
ಜೆಸ್ಕಾಂ ಎಇ ಭೀಮೇಶ್ ಮಾತನಾಡಿ, ತಾಲೂಕಿನಲ್ಲಿ 18,938 ವಿದ್ಯುತ್ ಗ್ರಾಹಕರಿದ್ದು, 18,384 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ 16,940 ಗ್ರಾಹಕರು ಯೋಜನೆಯ ಫಲಾನುಭವಿಗಳಾಗಿದ್ದಾರೆ. 2025ರ ಮೇ ತನಕ 2.03 ಕೋಟಿ ರೂ. ಸಬ್ಸಿಡಿ ಮೊತ್ತವನ್ನು ಸರ್ಕಾರ ಮಂಜೂರು ಮಾಡಿದೆ ಎಂದು ತಿಳಿಸಿದರು.
ಕಂಪ್ಲಿ ಮೆಟ್ರಿ ಗ್ರಾಮದಲ್ಲಿ ವಿದ್ಯುತ್ ವ್ಯತ್ಯಯ ಹೆಚ್ಚಿದೆ, ಮಾವಿನಹಳ್ಳಿಯಲ್ಲಿ ಐಪಿ ಸೆಟ್ ಸಮಸ್ಯೆ ಬಂದಾಗ ಅಲ್ಲಿನ ಲೈನ್‌ಮೆನ್ ಸ್ಪಂದಿಸುತ್ತಿಲ್ಲ ಎಂಬ ದೂರುಗಳು ಪ್ರಸ್ತಾಪವಾದವು. ಶಾಲೆಗಳಿಗೆ ಉಚಿತ ವಿದ್ಯುತ್ ನೀಡುವಂತೆ ಆದೇಶವಾಗಿದ್ದು, ಸೌಲಭ್ಯ ಕಲ್ಪಿಸಲು ಜೆಸ್ಕಾಂ ಅಧಿಕಾರಿಗಳು ಮುಂದಾಗಬೇಕೆಂದು ಎಂದು ತಾಪಂ ಇಒ ಆರ್.ಕೆ.ಶ್ರೀಕುಮಾರ್ ತಿಳಿಸಿದರು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಆಪ್ತ ಸಮಾಲೋಚಕ ವೆಂಕಟೇಶ ಯುವನಿಧಿ ಯೋಜನೆ ಮಾತನಾಡಿ, 2023-24 ಹಾಗೂ 2025ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣರಾದವರು ಯುವನಿಧಿಗೆ ಅರ್ಜಿ ಸಲ್ಲಿಸಬಹುದು. ಫಲಿತಾಂಶ ಪ್ರಕಟವಾಗಿ 6ತಿಂಗಳ ತನಕ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಅನಂತಪುರ ಬಸ್ ಮೆಟ್ರಿ, ಹಳೇದರೋಜಿಯಲ್ಲಿ ಸರಿಯಾಗಿ ನಿಲ್ಲುತ್ತಿಲ್ಲ. ಸಂಜೆ 4.30ರ ನಂತರ ಬಳ್ಳಾರಿಗೆ, ಬಳ್ಳಾರಿಯಿಂದ ಸಂಜೆ 5ರಿಂದ 7ಗಂಟೆ ತನಕ ಕಂಪ್ಲಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬ ವಿಷಯ ಪ್ರಸ್ತಾಪವಾದಾಗ ಸಾರಿಗೆ ಸಂಚಾರ ನಿಯಂತ್ರಕ ಆದಿಶೇಷ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಶಿವಕುಮಾರ್, ವಿಜಯಲಕ್ಷ್ಮೀ, ಶಿವರಾಜಕುಮಾರ್, ವಿ.ರಮೇಶ, ಗೌಡ್ರು, ಕೆ.ಸಿದ್ದಪ್ಪ, ರೇಣುಕಮ್ಮ, ಎಂ.ರಾಜಾಭಕ್ಷಿ, ತಿಮ್ಮಪ್ಪ ಇತರರಿದ್ದರು.