ಕುಶಾಲನಗರ: ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ತಾಲೂಕು ಸಭಾಂಗಣದಲ್ಲಿ ಗುರುವಾರ ನಡೆಯಿತು.
ಗೃಹಜ್ಯೋತಿ ಯೋಜನೆ ವಿಷಯಗಳ ಪ್ರಸ್ತಾವನೆಯ ಸಂದರ್ಭದಲ್ಲಿ ಹೆಬ್ಬಾಲೆಯಲ್ಲಿ ನೂತನ ಸೆಸ್ಕ್ ವಿದ್ಯುತ್ ಶಾಖಾ ಕಚೇರಿಯನ್ನು ತೆರಯುವ ಮೂಲಕ ಗ್ರಾಮಾಂತರ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವ ಸಂಬಂಧವಾಗಿ ಇಲಾಖೆಯ ವ್ಯವಸ್ಥಾಪಕರಿಗೆ ಪತ್ರ ವ್ಯವಹಾರ ಮಾಡುವ ಬಗ್ಗೆ ಸಭೆಯಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ ವಿ.ಪಿ.ಶಶಿಧರ್ ಮಾತಾನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹ ಜ್ಯೋತಿ, ಗೃಹಲಕ್ಷ್ಮಿ, ಯುವ ನಿಧಿ ಯೋಜನೆಗಳ ಬಗ್ಗೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಜತೆಗೆ ಯೋಜನೆಯೂ ಎಲ್ಲ ಫಲಾನುಭವಿಗಳಿಗೆ ತಲುಪಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಭೆಯಲ್ಲಿ ಹಾಜರಿದ್ದ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿವೃದ್ಧಿ ಪೂರಕವಾದ ಮಾಹಿತಿ ಸಂಗ್ರಹಿಸಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ಹೆಚ್ಚುವರಿ ಸಾರಿಗೆ ಸಂಪರ್ಕದ ವ್ಯವಸ್ಥೆ ಮತ್ತು ಯೋಜನೆಯಲ್ಲಿ ಪಲಾನುಭವಿಗಳು ಹೆಚ್ಚಾಗಿರುವ ಬಗ್ಗೆ ಇನ್ನೂ ಬಾಕಿ ಇರುವ ಫಲಾನುಭವಿಗಳ ಸಂಖ್ಯೆಗಳ ಬಗ್ಗೆ ಹಾಜರಿದ್ದ ಅಧಿಕಾರಿಗಳೊಂದಿಗೆ ಸವಿಸ್ತಾರವಾದ ಚರ್ಚೆಗಳು ನಡೆದವು.
ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಇಒ ಪರಮೇಶ್ ಕುಮಾರ್, ಜಿಲ್ಲಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಕೆ.ಸಿ.ಭೀಮಯ್ಯ, ತಾಲೂಕು ಸಮಿತಿ ಸದಸ್ಯ ಕೆ.ಎಸ್.ಕೃಷ್ಣಗೌಡ, ಶ್ರೀನಿವಾಸನ್, ಅಬ್ದುಲ್‌ರಜಾಕ್, ರಫೀಕ್ ಖಾನ್, ಆದಂ, ಮಲ್ಲಿಕಾರ್ಜುನ, ಶ್ರೀನಿವಾಸ್, ಮುಸ್ತಫಾ, ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶ್ರೀದೇವಿ, ವಿದ್ಯುತ್ ಇಲಾಖೆಯ ಇಂಜಿನಿಯರ್ ರಾಣಿ, ಸಾರಿಗೆ ಇಲಾಖೆ ಅಧಿಕಾರಿ ನಾಗಮಲ್ಲೇಶ್, ಅಶೋಕ್ ಮತ್ತು ಉದ್ಯೋಗ ವಿನಿಮಯ ಇಲಾಖೆ ಅಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.