ಬೆಳಗಾವಿ: ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ, ಜಿಪಿಎಸ್ ಮಾಡುವ ಸಂದರ್ಭದಲ್ಲಿ ಹಣ ಬೇಡಿಕೆಯಿಟ್ಟಿರುವವರ ವಿರುದ್ಧ ಮುಲಾಜಿಲ್ಲದೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸಿಇಒ ರಾಹುಲ ಶಿಂಧೆ ಎಚ್ಚರಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ತಾಪಂ ಅಧಿಕಾರಿಗಳೊಂದಿಗೆ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ವಿಧಾನ ಸರಿಯಾದ ರೀತಿಯಲ್ಲಿ ಆಗಬೇಕು. ವಸತಿ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಮತ್ತು ಮನೆಯ ಜಿಪಿಎಸ್ ಮಾಡುವ ಸಂದರ್ಭದಲ್ಲಿ ದುಡ್ಡು ಕೇಳುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಇದು ಗಂಭೀರ ವಿಷಯವಾಗಿದೆ. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಮುಖ್ಯಮಂತ್ರಿಗಳ ಪ್ರಗತಿ ಪರಿಶೀಲನೆ ನಂತರ ಜಿಲ್ಲೆಯಲ್ಲಿನ ವಸತಿ ಯೋಜನೆಯ ಪ್ರಸ್ತುತ ಪ್ರಗತಿ ಹೋಲಿಕೆ ಮಾಡಿದ್ದಲ್ಲಿ ಪ್ರಗತಿಯಲ್ಲಿ ವ್ಯತ್ಯಾಸ ಕಂಡು ಬಂದಿರುವುದಿಲ್ಲ. ಕೆಲ ವಸತಿ ಮನೆಗಳು ಪ್ರಾರಂಭವಾಗದಿರುವುದು ಕಂಡು ಬಂದಿದ್ದು, ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತ್ಯೇಕಾಗಿ ಸಭೆ ಮಾಡಿ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.
ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ ಮಾತನಾಡಿ, ಕರ ವಸೂಲಾತಿಗೆ ಸಂಬಂಧಿಸಿದಂತೆ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿ ಹೆಚ್ಚಿನ ಪ್ರಮಾಣದಲ್ಲಿ ಕರ ವಸೂಲಾತಿ ಮಾಡಲು ಕ್ರಮವಹಿಸುವಂತೆ ಸೂಚನೆ ನೀಡಲಾಗಿತ್ತು. ಆದರೂ ಕರ ವಸೂಲಾತಿ ಹೆಚ್ಚಿನ ಪ್ರಮಾಣದಲ್ಲಿ ಮಾಡದೆ ಪ್ರಗತಿ ಕುಂಠಿತವಾಗಿರುತ್ತದೆ. ಪ್ರಸಕ್ತ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಕರ ವಸೂಲಾತಿಯಲ್ಲಿ ಶೇ.100 ಪ್ರಗತಿ ಸಾಧಿಸಿ ಇಲ್ಲವಾದಲ್ಲಿ ತಮ್ಮ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಉಪಕಾರ್ಯದರ್ಶಿ(ಆಡಳಿತ) ಬಸವರಾಜ ಹೆಗ್ಗನಾಯಕ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಇತರರಿದ್ದರು.