ನರಗುಂದ: ಕನಿಷ್ಠ ಸೌಲಭ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಪಟ್ಟಣದ ಅಂಧ ಫಕ್ರುಸಾಬ್ನ ಕುಟುಂಬಕ್ಕೆ ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಜಿ. ಸಲಗರೆ ಅವರು ಬುಧವಾರ ಪಡಿತರ ಕಾರ್ಡ್ ವಿತರಿಸಿದರು.
ಕಣ್ಣು ಕಾಣದೇ ಹೊರಕೇರಿ ಬಡಾವಣೆಯ ನಿವಾಸಿ ಫಕ್ರುಸಾಬ್ ಸವಟಗಿ ಅವರು ಅನುಭವಿಸುತ್ತಿದ್ದ ಯಾತನೆ ಕುರಿತು ‘ದೃಷ್ಟಿಗೆ ಅಂಧಕಾರ; ಬದುಕು ದುಸ್ತರ’ ಶೀರ್ಷಿಕೆಯಡಿ ಸೆ. 2ರಂದು ವರದಿ ಪ್ರಕಟಿಸಲಾಗಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಅಗತ್ಯ ಸೌಲಭ್ಯ ಕಲ್ಪಿಸುವಂತೆ ಸೆ. 14ರಂದು ತಹಸೀಲ್ದಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿತ್ತು. ಅಲ್ಲದೆ, ಸೌಲಭ್ಯ ಕಲ್ಪಿಸಿರುವ ಕುರಿತು ಸ್ವತಃ ನ್ಯಾಯಾಧೀಶರು ಅಧಿಕಾರಿಗಳೊಂದಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಕಣ್ಣಿನ ಶಸ್ತ್ರ ಚಿಕಿತ್ಸೆಗೆ ತಗುಲುವ ವೆಚ್ಚದ ಕುರಿತು ವೈದ್ಯರಿಂದ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಫಕ್ರುಸಾಬ್ಗೆ ತಿಳಿಸಿದರು. ನಂತರ ಶಸ್ತ್ರ ಚಿಕಿತ್ಸೆಗೆ ಬೇಕಾದ ಸಹಾಯಧನ ನೀಡಲು ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಎ.ಎಚ್. ಮಹೇಂದ್ರ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ಅವರಿಗೆ ಸೂಚಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಶಿರಸ್ತೇದಾರ್ ಬಿ.ಎಂ. ಕುಕನೂರ, ತಾಲೂಕು ಕಾನೂನು ಸೇವೆಗಳ ಸಮಿತಿ ಸಹಾಯಕ ಬಿ.ಎಸ್. ಕಲ್ಲಪ್ಪನವರ, ನೇತಾಜಿ ನರಗುಂದ, ಇಬ್ರಾಹಿಂ ಸವಟಗಿ, ಸಲೀಮಾ ಭಾಂಗಿ, ದಾದಾಪೀರ ಲೋಧಿ ಇತರರಿದ್ದರು.