ಜಿಲ್ಲೆ

ಪ್ಲಾಸ್ಮಾ ದಾನ ಮಾಡಿದ ಕಾನ್ಸ್​ಟೇಬಲ್

ಹುಬ್ಬಳ್ಳಿ: ಕರೊನಾ ಸೋಂಕಿನಿಂದ ಗುಣ ಹೊಂದಿ ಕರ್ತವ್ಯಕ್ಕೆ ಹಾಜರಾಗಿರುವ ಘಂಟಿಕೇರಿ ಪೊಲೀಸ್ ಠಾಣೆ ಕಾನ್ಸ್​ಟೇಬಲ್ ವಿಠ್ಠಲ ಮಾದರ ಸೋಂಕಿತ ವೃದ್ಧರೊಬ್ಬರಿಗೆ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರರಿಗೆ ಮಾದರಿ ಎನಿಸಿದ್ದಾರೆ.

ಆ.3ರಂದು ಸೋಂಕಿಗೆ ತುತ್ತಾಗಿದ್ದ ವಿಠ್ಠಲ, ದೇಶಪಾಂಡೆ ಫೌಂಡೇಶನ್ ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆದು ಆ.12ರಂದು ಬಿಡುಗಡೆಯಾಗಿದ್ದರು. ನವನಗರದ ಕ್ಯಾನ್ಸರ್ ಆಸ್ಪತ್ರೆಯ ಕೋವಿಡ್ ಸೆಂಟರ್​ನಲ್ಲಿ ದಾಖಲಾಗಿರುವ ಸೋಂಕಿತ ವೃದ್ಧರೊಬ್ಬರಿಗೆ ‘ಎ’ ಪಾಸಿಟಿವ್ ರಕ್ತದ ಗುಂಪಿನವರ ಪ್ಲಾಸ್ಮಾ ಬೇಕಿತ್ತು. ಈ ಬಗ್ಗೆ ಮಾಹಿತಿ ದೊರೆತ ಕೂಡಲೇ ವಿಠ್ಠಲ ಪ್ಲಾಸ್ಮಾ ದಾನ ಮಾಡಿ ಸೋಂಕಿತರೊಬ್ಬರ ಜೀವ ಉಳಿಸಲು ಮುಂದಾಗಿದ್ದಾರೆ. ಒತ್ತಡದ ಕರ್ತವ್ಯದ ನಡುವೆಯೂ ಪ್ಲಾಸ್ಮಾ ದಾನ ಮಾಡಿದ ವಿಠ್ಠಲ ಕಾರ್ಯಕ್ಕೆ ಇನ್ಸ್​ಪೆಕ್ಟರ್ ಮಹಾಂತೇಶ ಹೊಳಿ ಸೇರಿ ಎಲ್ಲ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.