ಜಿಲ್ಲೆ

ಪ್ಲಾಸ್ಟಿಕ್ ರಾಷ್ಟ್ರಧ್ವಜ ಮಾರಾಟಕ್ಕೆ ಕಡಿವಾಣ ಹಾಕಿ

ಬೀದರ್: ಪ್ಲಾಸ್ಟಿಕ್ ರಾಷ್ಟ್ರ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಮನವಿ ಸಲ್ಲಿಸಿ, ಸ್ವಾತಂತ್ರ್ಯೋತ್ಸವ ನಿಮಿತ್ತ ರಾಷ್ಟ್ರ ಧ್ವಜವನ್ನು ಹೆಮ್ಮೆಯಿಂದ ಹಾರಿಸುತ್ತೇವೆ. ಆದರೆ ಅದೇ ದಿನ ಪ್ಲಾಸ್ಟಿಕ್ ಧ್ವಜ ಮಾರುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದೆ.
ರಾಷ್ಟ್ರಧ್ವಜ ಗೌರವದ ಸಂಕೇತವಾಗಿದೆ. ದೇಶದ ಜನರು ಕೇವಲ ಆ.15 ಹಾಗೂ ಜ.26ರ ಗಣರಾಜ್ಯೋತ್ಸವ ದಿನ ಧ್ವಜಕ್ಕೆ ಗೌರವ ಸಮರ್ಪಿಸುತ್ತಾರೆ. ಈ ವೇಳೆ ಕಾಗದ ಮತ್ತು ಪ್ಲಾಸ್ಟಿಕ್ ಧ್ವಜಗಳು ಸಂಜೆಯಾಗುತ್ತಿದ್ದಂತೆ ರಸ್ತೆಯಲ್ಲಿ ಬೀಳುತ್ತವೆ. ಇದು ರಾಷ್ಟ್ರಧ್ವಜಕ್ಕೆ ಮಾಡುವ ಅಪಮಾನ. ಇಂಥ ಅಗೌರವ ತಡೆಯಲು ಹಿಂದು ಜನಜಾಗೃತಿ ಸಮಿತಿಯು ಮುಂಬೈ ಹೈಕೋಟ್೯ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಪ್ಲಾಸ್ಟಿಕ್ ಧ್ವಜದಿಂದ ಆಗುವ ಅಪಮಾನ ನಿಲ್ಲಿಸುವಂತೆ ಸರ್ಕಾರಕ್ಕೆ ಆದೇಶ ನೀಡಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುತ್ತೋಲೆ ಹೊರಡಿಸಿವೆ. ಆದರೆ ಇನ್ನೂ ಪ್ಲಾಸ್ಟಿಕ್ ಧ್ವಜ ಮಾರಾಟ ನಿಂತಿಲ್ಲ ಎಂದು ಹೇಳಿದೆ.
ಸಮಿತಿ ಜಿಲ್ಲಾ ಸಮನ್ವಯಕ ವೆಂಕಟರಮಣ ನಾಯಕ್, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ವಕೀಲರಾದ ಬಿ.ಎಸ್. ಪಾಟೀಲ್, ಕೆ.ಭದ್ರಶೆಟ್ಟಿ, ಬಸವಪ್ರಕಾಶ, ಪ್ರಮುಖರಾದ ಸುವರ್ಣ ಭಜಂತ್ರಿ, ಯಮನಪ್ಪ ಭಜಂತ್ರಿ ಇದ್ದರು.