ಜಿಲ್ಲೆ

ಪ್ಲಾಸ್ಟಿಕ್ ರಾಷ್ಟ್ರಧ್ವಜ ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಮನವಿ

ಹಾಸನ: ಸ್ವಾತಂತ್ರೃ ದಿನಾಚರಣೆಯ ದಿನ ನ್ಯಾಯಾಲಯದ ಆದೇಶದಂತೆ ಪ್ಲಾಸ್ಟಿಕ್ ರಾಷ್ಟ್ರಧ್ವಜ ಹಾಗೂ ತ್ರಿವರ್ಣ ಧ್ವಜದ ಮಾಸ್ಕ್ ಬಳಕೆಗೆ ನಿಷೇಧಿಸುವ ಸಂಬಂಧ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ವೇದಿಕೆಯಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರನ್ನು ಭೇಟಿಯಾದ ವೇದಿಕೆಯ ಪದಾಧಿಕಾರಿಗಳು, ರಾಷ್ಟ್ರಧ್ವಜವು ದೇಶದ ಭಾವೈಕ್ಯದ ಸಂಕೇತವಾಗಿದೆ. ಆಗಸ್ಟ್ 15 ಮತ್ತು ಜನವರಿ 26ರಂದು, ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ಪ್ರದರ್ಶಿಸಲಾಗುತ್ತದೆ. ಆದರೆ ಅದೇ ದಿನ ಪ್ಲಾಸ್ಟಿಕ್‌ನ ಸಣ್ಣ ಸಣ್ಣ ರಾಷ್ಟ್ರಧ್ವಜಗಳು ರಸ್ತೆ ಮತ್ತು ಚರಂಡಿಗಳಲ್ಲಿ ಹರಿದ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬರುತ್ತವೆ. ಪ್ಲಾಸ್ಟಿಕ್ ಧ್ವಜಗಳು ಬೇಗನೇ ನಾಶವಾಗುವುದಿಲ್ಲ. ಹೀಗಾಗಿ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇದರ ಜತೆಗೆ ಈ ವರ್ಷ ಅಂಗಡಿಗಳಲ್ಲಿ ಮತ್ತು ಇ-ಕಾಮರ್ಸ್ ಜಾಲತಾಣಗಳಲ್ಲಿ (ವೆಬ್‌ಸೈಟ್) ತ್ರಿವರ್ಣ ಧ್ವಜದ ಮಾಸ್ಕ್‌ಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬರುತ್ತಿದೆ. ತ್ರಿವರ್ಣ ಧ್ವಜದ ಮಾಸ್ಕ್ ಬಳಕೆಯಿಂದ ರಾಷ್ಟ್ರಧ್ವಜದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ. ತ್ರಿವರ್ಣ ಧ್ವಜದ ಮಾಸ್ಕ್ ದೇಶಭಕ್ತಿ ಪ್ರದರ್ಶನದ ಮಾಧ್ಯಮವಲ್ಲ. ಅಲ್ಲದೇ ಧ್ವಜ ಸಂಹಿತೆಗನುಸಾರ ರಾಷ್ಟ್ರಧ್ವಜವನ್ನು ಈ ರೀತಿ ಬಳಸುವುದು ಧ್ವಜಕ್ಕೆ ಮಾಡಿದ ಅವಮಾನವೇ ಆಗಿದೆ. ಇದು ರಾಷ್ಟ್ರೀಯ ಗೌರವದ ಮಾನನಷ್ಟ ತಡೆ ಕಾಯ್ದೆ 1971ರ ಉಲ್ಲಂಘನೆಯಾಗಿದೆ. ಆದ್ದರಿಂದ, ತ್ರಿವರ್ಣ ಧ್ವಜದ ಮಾಸ್ಕ್ ಮಾರಾಟ ಮಾಡುವವರ ಮತ್ತು ಬಳಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಪದಾಧಿಕಾರಿಗಳಾದ ಸುರೇಶ್ ಗೌಡ, ಸುಜಾತಾ ನವೀನ್, ವೇದಾವತಿ, ರಾಮಚಂದ್ರೇಗೌಡ, ಚಂದ್ರಕಲಾ, ಕಲಾವತಿ ಇತರರು ಉಪಸ್ಥಿತರಿದ್ದರು.