ಮೈಸೂರು: ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಭೂಮಿ ನಾಶವಾಗುತ್ತದೆ ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಹೇಳಿದರು.
ಸುತ್ತೂರು ಗ್ರಾಮದ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 2016ರಲ್ಲಿ ಮೈಸೂರು ನಗರದಲ್ಲಿ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಆದರೆ ಇಂದಿಗೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ನಿತ್ಯ ಬಳಕೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಲು ಪರ್ಯಾಯ ವಸ್ತುಗಳಾದ ಕೈಚೀಲ, ಬುಟ್ಟಿ, ಮರದ ಪದಾರ್ಥಗಳು, ಇತರ ಪರಿಸರ ಸ್ನೇಹಿ ಪದಾರ್ಥಗಳನ್ನು ಬಳಕೆ ಮಾಡಬೇಕು. ಪರಿಸರ ಸಂರಕ್ಷಣೆಗಾಗಿ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ಜಾಗೃತಿಯ ಅವಶ್ಯವಿದೆ ಎಂದರು.
ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಸಂಸ್ಥೆಯ ಉಪ ಕೃಷಿ ನಿರ್ದೇಶಕ ಡಾ.ಜಿ.ಎಚ್.ಯೋಗೇಶ್ ಮಾತನಾಡಿ, ಪರಿಸರವನ್ನು ಉಳಿಸಿ, ಬೆಳೆಸಬೇಕು. ಜತೆಗೆ ಕೃಷಿಯಲ್ಲಿ ಪ್ಲಾಸ್ಟಿಕ್ ಬಳಕೆ ತಡೆಯಬೇಕು ಎಂದರು.
ನೈಸರ್ಗಿಕ ಕೃಷಿಕರಾದ ಇಂದ್ರಪ್ರಸ್ಥ ಕಳಲವಾಡಿಯ ಡಾ.ಎ.ಪಿ.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು. ಹೊಸಕೋಟೆ ಗ್ರಾಮದ ಶ್ರೀ ಗುರುಮಹಂತೇಶ್ವರ ಪ್ರೌಢಶಾಲೆಯ ಮಕ್ಕೃಳು ಪರಿಸರ ಜಾಗೃತಿ ಕುರಿತು ಕಿರು ನಾಟಕ ಪ್ರದರ್ಶಿಸಿದರು.
ವಿವಿಧ ರೀತಿಯ ಮಾವಿನ ವಾಟೆಗಳು, ಹಣ್ಣನ ಬೀಜಗಳು, ಹಳೆಯ ಬಟ್ಟೆಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಗಿಡ ಹಾಗೂ ಬಟ್ಟೆ ಚೀಲಗಳನ್ನು ರೈತರಿಗೆ ವಿತರಿಸಲಾಯಿತು.
ವಸ್ತುಪ್ರದರ್ಶನದಲ್ಲಿ 100ಕ್ಕೂ ಹೆಚ್ಚು ಪ್ಲಾಸ್ಟಿಕ್‌ಗೆ ಪರ್ಯಾಯವಾದ ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಅಂದಾಜು 400 ಗಿಡಗಳನ್ನು ರೈತರಿಗೆ, ಶಾಲಾ ಮಕ್ಕೃಳಿಗೆ ವಿತರಣೆ ಮಾಡಲಾಯಿತು. ರೋಟರಿ ಬೃಂದಾವನ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಧರ್ಮಾನಂದ, ನಿವೃತ್ತ ಅಪರ ಕೃಷಿ ನಿರ್ದೇಶಕ ಡಾ. ವಿಷಕಂಠ, ಜೆಎಸ್‌ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ನಿರ್ದೇಶಕ ಎನ್.ಎಂ.ಶಿವಶಂಕರಪ್ಪ ಇದ್ದರು.