module: NormalModule; touch: (0.19583334, 0.19583334); modeInfo: ; sceneMode: Night; cct_value: 0; AI_Scene: (-1, -1); aec_lux: 48.0; 
ಜಿಲ್ಲೆ

ಪ್ಲಾಸ್ಟಿಕ್ ಬಳಕೆ ನಿಷೇಧ ಕಾನೂನಿನ ನ್ಯೂನತೆ ಸರಿಪಡಿಸಿ

ಅರಕಲಗೂಡು: ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ರೂಪಿಸಿರುವ ಕಾನೂನಿನಲ್ಲಿ ನ್ಯೂನತೆಗಳಿದ್ದು, ಸರ್ಕಾರ ಸರಿಪಡಿಸುವ ಕೆಲಸ ಮಾಡಬೇಕು ಎಂದು ಶಾಸಕ ಎ.ಮಂಜು ಆಗ್ರಹಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸೋಮವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಎಲ್ಲದಕ್ಕೂ ಕಾನೂನು ರೂಪಿಸಿದೆಯೇ ಹೊರತು ಅದು ಸರಿಯಾಗಿ ಪಾಲನೆಯಾಗುತ್ತಿದೆಯೇ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಉಚಿತ ವಿದ್ಯುತ್ ಸೇರಿದಂತೆ ಪ್ಲಾಸ್ಟಿಕ್ ತಯಾರಿಕೆಗೆ ಅಗತ್ಯವಿರುವ ಸೌಲಭ್ಯಗಳನ್ನು ಸಹ ಸರ್ಕಾರವೇ ಒದಗಿಸುತ್ತಿದೆ. ಪ್ಲಾಸ್ಟಿಕ್ ಉತ್ಪಾದನೆಗೆ ಮಹತ್ವ ಕೊಟ್ಟು ತಪ್ಪೆಸಗುತ್ತಿದ್ದು, ಇನ್ನು ನಿಷೇಧ ಎಲ್ಲಿಂದ ಬರಬೇಕು? ಕಾನೂನಿನಲ್ಲಿ ಸಾಕಷ್ಟು ಲೋಪದೋಷ ಎದು ್ದಕಾಣಿಸುತ್ತಿವೆ. ಇಷ್ಟಲ್ಲದೆ ರಾಜಕಾರಣಿಗಳು ಹಾಗೂ ಬಂಡವಾಳಶಾಹಿಗಳ ಮಾಲೀಕತ್ವದ ಕೈಗಾರಿಕೆಗಳಿವೆ. ಪ್ಲಾಸ್ಟಿಕ್ ಉತ್ಪಾದನೆಗೂ ಕಡಿವಾಣ ಹಾಕಿ ಅದರ ಬಳಕೆಗೆ ನಿಷೇಧ ಹೇರಬೇಕು. ಕಾನೂನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ ವಿಧಿಸುವಂತಾಗಬೇಕು. ಈ ಕುರಿತು ಸರ್ಕಾರದ ಕೆಲವು ತಪ್ಪು ನ್ಯೂನತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಪರಿಸರವನ್ನು ಮಾಲಿನ್ಯ ಮುಕ್ತಗೊಳಿಸಲು ಎಲ್ಲರೂ ಕೈಜೋಡಿಸಿ, ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಪ್ರತಿಜ್ಞೆ ಮಾಡಬೇಕು. ಮುಂದಿನ ಪೀಳಿಗೆಗೂ ಪರಿಸರ ಸಂರಕ್ಷಣೆ ಮಾಡಬೇಕಾದರೆ ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಬೆಳೆಸಬೇಕು ಎಂದರು.

ಹಾಸನ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ಆರ್. ಭಾಸ್ಕರ್ ಮಾತನಾಡಿ, ಬಾವಿ ನೀರು ಸೇವಿಸುತ್ತಿದ್ದ ಜನರು ಈಗ ಕುಡಿಯುವ ನೀರಿಗೆ ದುಡ್ಡು ತೆರಬೇಕಾಗಿದೆ. ಪರಿಸರ ಉಳಿಯದಿದ್ದರೆ ಮುಂದೊಂದು ದಿನ ಆಕ್ಸಿಜನ್‌ಗೂ ಹಣ ನೀಡಿ ಖರೀದಿಸುವ ಕಾಲ ದೂರವಿಲ್ಲ. ಹೀಗಾಗಿ ಮನುಕುಲಕ್ಕೆ ಎದುರಾಗುವ ಗಂಡಾಂತರಗಳಿಂದ ತಪ್ಪಿಸಿಕೊಳ್ಳಲು ಪರಿಸರ ಉಳಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಹಾಸನ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಎಚ್.ಎ. ಕಿಶೋರ್ ಕುಮಾರ್ ಪರಿಸರ ಜಾಗೃತಿ ಕುರಿತು ಉಪನ್ಯಾಸ ನೀಡಿದರು. ಪಪಂ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷ ಸುಭಾನ ಷರೀಫ್, ಸಿಡಿಸಿ ಉಪಾಧ್ಯಕ್ಷ ಬಾಲಾಜಿ, ಜಿಲ್ಲಾ ಕಸಾಪ ಕಾರ್ಯದರ್ಶಿ ಜಾವಗಲ್ ಪ್ರಸನ್ನ, ಪ್ರಾಂಶುಪಾಲ ಎ.ಎಲ್. ಮಂಜುನಾಥ್, ಸಿಡಿಸಿ ಸದಸ್ಯರು ಮತ್ತು ಉಪನ್ಯಾಸಕರು ಇದ್ದರು. ಪರಿಸರ ಜಾಗೃತಿ ಕುರಿತು ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಬೇಲೂರು ಚಂದನ ಮತ್ತು ತಂಡದವರಿಂದ ಪರಿಸರ ಗೀತೆ, ಬೀದಿ ನಾಟಕ ಪ್ರದರ್ಶನ, ಕಾಲ್ನಡಿಗೆ ಜಾಥಾ ನಡೆಯಿತು. ಕಾಲೇಜು ಮೈದಾನದಲ್ಲಿ ಶಾಸಕರು ಸಸಿ ನೆಟ್ಟು ನೀರೆರೆದರು.