ಜಿಲ್ಲೆ

ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಟರ್‌ಲಾಕ್ ತಯಾರಿಸುವ ಘಟಕಕ್ಕೆ ಮೇಯರ್ ಭೇಟಿ

ಮೈಸೂರು: ವಿದ್ಯಾರಣ್ಯಪುರಂನ ಸೀವೇಜ್ ಫಾರಂನ ಪ್ಲಾಸ್ಟಿಕ್ ತ್ಯಾಜ್ಯದಿಂದ ಇಂಟರ್‌ಲಾಕ್ ತಯಾರಿಸುವ ಘಟಕಕ್ಕೆ ಮಂಗಳವಾರ ಮೇಯರ್ ಶಿವಕುಮಾರ್ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಿದರು.


ಸೀವೇಜ್ ಫಾರಂನಲ್ಲಿ ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಪ್ಲಾಸ್ಟಿಕ್ ತ್ಯಾಜ್ಯದಿಂದ ಪಾದಚಾರಿ ಮಾರ್ಗಕ್ಕೆ ಬಳಸುವ ಇಂಟರ್‌ಲಾಕ್ ಸೇರಿದಂತೆ ಇನ್ನಿತರ ವಸ್ತುಗಳನ್ನು ತಯಾರಿಸುವ ಘಟಕ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ವಿವಿಧ ಅಲಂಕಾರಿಕ ವಸ್ತುಗಳು ತಯಾರಿಸುವುದನ್ನು ವೀಕ್ಷಿಸಿದರು. ಜಾಗೃತ್ ಟೆಕ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ದಿನೇಶ್ ಬೋಪಣ್ಣ ಮಾಹಿತಿ ಪಡೆದರು.


ಈ ಕಾರ್ಖಾನೆಯೂ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಮಾನ್ಯತೆ ಹೊಂದಿದ್ದು, ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಕರು ಹಾಗೂ ಬ್ರಾಂಡ್ ಓನರ್ಸ್‌ಗಳು ಈ ಕಾರ್ಖಾನೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಬಳಸಿ ತಯಾರಿಸುವ ಉತ್ಪನ್ನಗಳನ್ನು ವಿವಿಧೆಡೆ ಮರುಬಳಕೆ ಮಾಡಲಾಗುತ್ತಿದೆ. ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುತ್ತಿರುವ ಮರುಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಪಾದಚಾರಿ ಮಾರ್ಗಕ್ಕೆ ಇಂಟರ್‌ಲಾಕ್, ಟೈಲ್ಸ್ ತಯಾರಿಸಲಾಗುತ್ತಿದೆ.


ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು, ವಲಯ ಸಹಾಯಕ ಆಯುಕ್ತರು ಹಾಜರಿದ್ದರು.