ಹಾಸನ: ಮುಂದಿನ ದಿನಗಳಲ್ಲಿ ‘ನಮ್ಮ ಕಸ ನನ್ನ ಹೊಣೆ’ ಎನ್ನುವ ಘೋಷಣೆಯೊಂದಿಗೆ ಕಸ ಸಂಗ್ರಹಣೆ ಅಭಿಯಾನವನ್ನು ಶೀಘ್ರವೇ ಆರಂಭಿಸಲಾಗುವುದು ಎಂದು ಕ್ಲಿಯರಿನ್ ಸಂಸ್ಥೆಯ ಸಂಸ್ಥಾಪಕ ಎಚ್.ಎಸ್. ಚಂದ್ರಶೇಖರ್ ತಿಳಿಸಿದರು.
ನಗರದ ಹಾಸನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ನಡೆದ ಸದಸ್ಯರ ತಿಂಗಳ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾವು ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಎಸೆದರೆ ಅದು ಸಣ್ಣ ಸಣ್ಣ ತುಂಡುಗಳಾಗಿ ಮಣ್ಣಿಗೆ ಸೇರುತ್ತದೆ. ಈ ರೀತಿ ಸೇರಿದರೆ ಮತ್ತು ಭೂಮಿ ಒಳಗೆ ಕೆಮಿಕಲ್ ಸೇರಿ ಬೆಳೆಯ ಇಳುವರಿಯಲ್ಲಿ ಗಣನೀಯವಾಗಿ ಕಡಿಮೆ ಆಗುತ್ತದೆ. ಪ್ಲಾಸ್ಟಿಕ್ ಕವರ್ ಒಳಗೆ ಗಂಟು ಕಟ್ಟಿ ಹಸಿ ಹಾಗೂ ಇತರೆ ಕಸವನ್ನು ಎಸೆಯಬಾರದು. ಕಸವನ್ನು ಭೂಮಿಗೆ ಹಾಕಿದರೆ ಅದು ಭೂಮಿಯಲ್ಲಿ ಕರಗುತ್ತದೆ ಎಂದರು.
ಕಾಗದವನ್ನು ಕೂಡ ಬೇಕಾಬಿಟ್ಟಿ ಬಳಸಬಾರದು. ಹೆಚ್ಚು ಬಳಸಿದರೆ ಮರಗಳು ಹೆಚ್ಚು ಬಳಕೆ ಆಗುತ್ತವೆ. ಸಣ್ಣ ಕಾಗದವನ್ನು ಮರು ಬಳಕೆ ಮಾಡಬಹುದು. ಇದನ್ನು ನಮ್ಮ ಸಂಸ್ಥೆಗೆ ತಂದು ಕೊಡಬಹುದು. ಇನ್ನು ಮನೆಯಲ್ಲಿ ಯಾವುದೇ ಕಸ ಇದ್ದರೂ ಅದನ್ನು ನಗರಸಭೆ ಕೂಡ ಪಡೆಯುತ್ತದೆ. ಇನ್ನು ಅಪಾಯಕಾರಿಯಾಗಿರುವ ಪ್ಲಾಸ್ಟಿಕ್‌ಗಳನ್ನು ಬೀದಿಯಲ್ಲಿ ಎಸೆದಾಗ ಹಸುಗಳು ಹಾಗೂ ಇತರೆ ಪ್ರಾಣಿಗಳು ಸೇವಿಸಿ ಸಾವನ್ನಪ್ಪಬಹುದು. ನಾವು ಬೆಳಗ್ಗೆ ಬ್ರಷ್ ಮಾಡುವುದರಿಂದಲೇ ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ನಮ್ಮ ಹೊಟ್ಟೆ ಒಳಗೆ ಪ್ಲಾಸ್ಟಿಕ್ ಸಲ್ಪ ಸಲ್ಪವೇ ಸೇರುತ್ತಿದೆ. ಇದನ್ನೆಲ್ಲ ನಿಯಂತ್ರಿಸಲು ‘ನಮ್ಮ ಕಸ ನನ್ನದೆ ಹೊಣೆ’ ಎಂಬ ಶೀರ್ಷಿಕೆಯಲ್ಲಿ ಕಸಕ್ಕೆ ಮುಕ್ತಿ ಕೊಡಲು ಹೊಸ ಅಭಿಯಾನ ಪ್ರಾರಂಭಿಸುತ್ತಿದ್ದೇವೆ. ಈ ವಿಚಾರವಾಗಿ ಸರಕಾರವು ಕೂಡ ನನ್ನನ್ನು ನೇಮಕ ಮಾಡಿಕೊಂಡಿದೆ ಎಂದು ಹೇಳಿದರು.
ಪ್ರತಿ ಪ್ರತಿ ಶಾಲಾ- ಕಾಲೇಜುಗಳಲ್ಲಿ ಮಕ್ಕಳಿಗೆ ಈ ವಿಚಾರವನ್ನು ತಲುಪಿಸಬೇಕು. ಹಸಿ ಕಸ ಸಂಗ್ರಹಿಸಿ ಅದನ್ನು ಗೊಬ್ಬರ ಮಾಡಿ ಉಪಯೋಗ ಪಡೆಯಬಹುದಾಗಿದೆ. ಕಸದ ಬಗ್ಗೆ ಒಂದು ನಿರ್ಧಾರ ಮಾಡಲಾಗಿದ್ದು, ಒಣ ಕಸ ಮತ್ತು ಹಸಿ ಕಸ ಎರಡನ್ನು ಬೇರೆ ಮಾಡಿ ಪ್ರತ್ಯೇಕ ಕಸ ವಿಲೇವಾರಿ ಮಾಡುವ ವಾಹನ ನೀಡಬೇಕು. ವಾರದ ಎರಡು ದಿನ ಒಣ ಕಸ, ಉಳಿದ ದಿನ ಹಸಿ ಕಸ ನೀಡುವಂತೆ ಮನವಿ ಮಾಡಿದರು. ಮನೆಯಲ್ಲೇ ಹಸಿ ಕಸವನ್ನು ಸಂಗ್ರಹಿಸಿ ಗೊಬ್ಬರ ಮಾಡಿಕೊಂಡು ಮನೆಯಲ್ಲಿಯೂ ಕೂಡ ಉಪಯೋಗಿಸಬಹುದಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ವಿಜಯ್ ದಿವಸ ಅಂಗವಾಗಿ ನಿವೃತ್ತ ಯೋಧರು ಹಾಗೂ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿ.ಕೆ. ಕಿರಣ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಭೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಕೆ. ನಾಗೇಶ್, ಖಜಾಂಚಿ ಬಿ.ಎಂ. ರವಿಕುಮಾರ್, ಎಚ್.ಪಿ. ಪ್ರಕಾಶ್, ಪ್ರಾಂತೀಯ ಅಧ್ಯಕ್ಷೆ ಡಾ. ವಿಶಾಲಾಕ್ಷಿ, ಲಿಯೋ ಕ್ಲಬ್ ಖಜಾಂಚಿ ಲಿಖಿತ್, ಕಾರ್ಯದರ್ಶಿ ಸುವರ್ಚಲಾ ಇತರರು ಉಪಸ್ಥಿತರಿದ್ದರು.