ಮಳವಳ್ಳಿ: ಪ್ರತಿಯೊಬ್ಬರಲ್ಲೂ ಒಂದೊಂದು ಪ್ರತಿಭೆಗಳು ಅಡಕವಾಗಿದ್ದು, ಅವುಗಳ ಅನಾವರಣಕ್ಕೆ ಪೂರಕ ವೇದಿಕೆ ದೊರಕದೆ ಪ್ರತಿಭಾವಂತರು ವಂಚಿತರಾಗಿದ್ದಾರೆ ಎಂದು ಬೆಳಕವಾಡಿ ಸಾರ್ವಜನಿಕ ಪ್ರೌಢಶಾಲೆ ಅಧ್ಯಕ್ಷ ಮಂಜುನಾಥ್ ಹೇಳಿದರು.
ಗ್ರಾಮದ ಜಯದೇವ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಎರಡು ದಿನಗಳ ಶಾಲಾ ಶೈಕ್ಷಣಿಕ ಮತ್ತು ಕಲಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿ, ಬಾಲ್ಯದಿಂದಲೇ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದರೆ ಭವಿಷ್ಯದ ಜೀವನದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವುದರ ಜತೆಗೆ ಸಮಾಜಕ್ಕೆ ಉತ್ತಮ ಸಾಧಕ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜು, ಶಾಲೆ ಸಂಸ್ಥಾಪಕ ಅಧ್ಯಕ್ಷೆ ಶಾಂತಾ ಬಸವರಾಜು, ಆಡಳಿತಾಧಿಕಾರಿ ಬಸವರಾಜು, ಪ್ರಗತಿ ಪರ ರೈತ ನಾಗರಾಜು ನಾಯ್ಡು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಶ್ರೀನಿವಾಸ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಾಜರಿದ್ದರು.