ಮಂಗಳೂರು: ದ.ಕ.ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಕಳೆದ ಮೂರು ತಿಂಗಳಿಂದ ಪ್ರೊಬೆಷನರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಏಳು ತಿಂಗಳ ಗರ್ಭಿಣಿಯಾಗಿದ್ದ ಎಸ್‌ಐಯೊಬ್ಬರು ಕರೋನಾದಿಂದ ಮೃತಪಟ್ಟಿದ್ದಾರೆ. ಕೋಲಾರ ಮೂಲದ ಶ್ಯಾಮಿಲಿ(24) ಮೃತಪಟ್ಟಿದ್ದು, ಈಕೆ ಏಳು ತಿಂಗಳ ಗರ್ಭಿಣಿಯಾಗಿದ್ದಾರೆ. ದ.ಕ. ಜಿಲ್ಲೆಯ ಪೊಲೀಸ್ ಇಲಾಖೆಯಲ್ಲಿ ಕೋವಿಡ್‌ನ ಎರಡನೇ ಸಾವು ಇದಾಗಿದೆ. ಮಂಗಳೂರು ಪೊಲೀಸ್
ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳೆದ ವಾರ ಪೊಲೀಸ್ ಸಿಬ್ಬಂದಿಯೊಬ್ಬರು ಕೊರೋನಾದಿಂದ ಮೃತಪಟ್ಟಿದ್ದರು.
2021 ಜ.11ರಂದು ಪ್ರೊಬೆಷರಿ ಎನ್‌ಐ ಆಗಿ ಶ್ಯಾಮಿಲಿ ಮಂಗಳೂರು ಎಸ್ಪಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರ ಬ್ಯಾಚ್‌ನ ಎಲ್ಲರನ್ನೂ ತರಬೇತಿಗೆ ಕಳುಹಿಸಿದ್ದರೆ, ಈಕೆ ಗರ್ಭಿಣಿಯಾದ ಕಾರಣ ತರಬೇತಿಗೆ ತೆರಳದೆ ಎಸ್ಪಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದರು. ಕೋವಿಡ್ ಸೋಂಕಿನ 2ನೇ ಅಲೆ ವೇಳೆ ಸರ್ಕಾರದ ನಿಯಮದಂತೆ ಮುಂಜಾಗ್ರತಾ ಕ್ರಮವಾಗಿ ಈಕೆಯನ್ನು ಸ್ವಂತ ಊರು ಕೋಲಾರಕ್ಕೆ
ರಜೆ ಮೇಲೆ ಕಳುಹಿಸಲಾಗಿತ್ತು.
ಕೋಲಾರದಲ್ಲಿ ಕೊರೋನಾ ಸೋಂಕಿಗೆ ಒಳಗಾದ ಈಕೆಯನ್ನು ಮೇ 2ರಂದು ಕೋಲಾರದ ಆರ್.ಎಂ.ಜಾಲಪ್ಪ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಈಕೆ ಮಂಗಳವಾರ ನಸುಕಿನ ಜಾವ ಸಾವಿಗೀಡಾಗಿದ್ದಾರೆ. ಈಕೆಯನ್ನು ಚಿಕಿತ್ಸೆಗೆ ದಾಖಲಿಸುವಲ್ಲಿ ಕೊಲಾರ ಎಸ್ಪಿ ನೆರವು ನೀಡಿದ್ದರು.
ಗರ್ಭಿಣಿಯಾದ ಹಿನ್ನೆಲೆಯಲ್ಲಿ ಈಕೆಗೆ ಕೋವಿಡ್ ಲಸಿಕೆ ನೀಡಿರಲಿಲ್ಲ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಈ ಕುರಿತು ಟ್ವಿಟರ್ ಮುಲಕ ಮಾಹಿತಿ ನೀಡಿದ್ದಾರೆ. ಪೊಲೀಸ್ ಕುಟುಂಬದಲ್ಲಿ ಕಿರಿಯ ಸದಸ್ಯರಾಗಿರುವ
ಶ್ಯಾಮಿಲಿ ಅವರು ಕೋವಿಡ್‌ಗೆ ಬಲಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಲ್ಲರೂ ಕೋವಿಡ್ ನಿಯಮ ಪಾಲಿಸಿ, ಪೊಲೀಸರೊಂದಿಗೆ ಸಹಕರಿಸಿ, ಸುರಕ್ಷಿತವಾಗಿರಿ ಎಂದು
ಮನವಿ ಮಾಡಿದ್ದಾರೆ.