ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ರಾಜಕೀಯ ತಜ್ಞ, ಲೇಖಕ ಪ್ರೊ.ಮುಜಾಫರ್ ಅಸ್ಸಾದಿ (63) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ತಡರಾತ್ರಿ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ, ಅಭಿಮಾನಿಗಳು, ಸ್ನೇಹಿತರು, ಶಿಷ್ಯ ವೃಂದ ಇದ್ದಾರೆ. ನಗರದ ಟಿಪ್ಪು ಸರ್ಕಲ್ ಬಳಿ ಇಸ್ಲಾಂ ಸಂಪ್ರದಾಯದಂತೆ ಶನಿವಾರ ಅಂತ್ಯಕ್ರಿಯೆ ನೆರವೇರಿತು.
ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಮುಜಾಫರ್ ಅಸ್ಸಾದಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಳಗ್ಗೆ 6 ಗಂಟೆಯಿಂದೆ ಸಂಜೆ 4 ವರೆಗೆ ನಗರದ ಅಪೋಲೋ ಆಸ್ಪತ್ರೆ ಬಳಿಯ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಕೆಲಕಾಲ ಮುಸ್ಲಿಂ ಹಾಸ್ಟೆಲ್ ಬಳಿಯೂ ಸಾರ್ವಜನಿಕ ದರ್ಶನ ಅವಕಾಶ ಕಲ್ಪಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್, ಮಾಜಿ ಸದಸ್ಯ ಮರಿತಿಬ್ಬೇಗೌಡ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಸಾಹಿತಿಗಳಾದ ದೇವನೂರು ಮಹಾದೇವ, ಅರವಿಂದ ಮಾಲಗತ್ತಿ, ಪ್ರಮುಖರಾದ ದಿನೇಶ್ ಅಮಿನ್‌ಮಟ್ಟು, ಡಾ.ಕೃಷ್ಣ ಹೊಂಬಳ, ಡಾ.ಬಿ.ಜೆ.ವಿಜಯಕುಮಾರ್, ಪ್ರಶಾಂತ್ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು.
2022ರಲ್ಲಿ ನಿವೃತ್ತಿಯಾಗಿದ್ದರು:
ಪ್ರೊ.ಮುಜಾಫರ್ ಅಸ್ಸಾದಿ ಮೈಸೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಯಾಗಿ 2022ರಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇದಕ್ಕೂ ಮೊದಲು ರಾಜ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕ, ಮುಖ್ಯಸ್ಥ ಹಾಗೂ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನ್ ಆಗಿದ್ದರು. ಉಡುಪಿ ಜಿಲ್ಲೆಯ ಶಿರ್ವ ಗ್ರಾಮದವರಾದ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಹಾಗೂ ಪಿಎಚ್ಡಿ, ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೊರಲ್ ಪದವಿ ಪಡೆದಿದ್ದರು. 500ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಕರ್ನಾಟಕದಲ್ಲಿ ಬಹುರೂಪಿ ಸ್ತ್ರೀವಾದ ಕಥನಗಳು ಮತ್ತು ಚಳವಳಿ, ಅಸ್ಮಿತೆ, ರಾಜಕಾರಣ ಮತ್ತು ಮೂಲಭೂತವಾದ ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವರ ಬರಹಗಳು ಫ್ರೆಂಚ್, ಮರಾಠಿ, ತಮಿಳು ಮತ್ತು ಉರ್ದು ಭಾಷೆಗಳಿಗೂ ಭಾಷಾಂತರಗೊಂಡು ಓದುಗರ ಗಮನ ಸೆಳೆದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ಪ್ರಶಸ್ತಿ ಪಡೆದಿದ್ದಾರೆ.
ಅವರು ಬುಡಕಟ್ಟು ಸಮುದಾಯದವರ ಬದುಕು, ಜೀವನ ಶೈಲಿಯ ಬಗ್ಗೆ ಅಪಾರವಾದ ಅಧ್ಯಯನ ನಡೆಸಿದ್ದಾರೆ. ಆದಿವಾಸಿಗಳ ಸ್ಥಳಾಂತರಕ್ಕೆ ನೇಮಿಸಿದ್ದ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಕೃಷಿ ಅಧ್ಯಯನ ಕ್ಷೇತ್ರ, ಜಾಗತೀಕರಣ, ಗಾಂಧೀವಾದ, ರಾಜಕೀಯ ಸಮಾಜಶಾಸ್ತ್ರ, ಪ್ರಜಾಪ್ರಭುತ್ವ ಸಿದ್ಧಾಂತ, ಸಾಮಾಜಿಕ ಚಳವಳಿಗಳು, ತುಲನಾತ್ಮಕ ಸರ್ಕಾರ ಮತ್ತು ಭಾರತದಲ್ಲಿ ರಾಜಕೀಯ, ಮಾನವ ಹಕ್ಕುಗಳು, ಜಾಗತಿಕ ರಾಜಕೀಯ ಸಿದ್ಧಾಂತ ಮೊದಲಾದ ವಿಚಾರಗಳ ಕುರಿತು ಅಳವಾದ ಅಧ್ಯಯನ ಮಾಡಿ ವಿಷಯ ಮಂಡನೆ ಮಾಡಿ ಗಮನ ಸೆಳೆದಿದ್ದಾರೆ.
ವಾರದ ಹಿಂದೆಯಷ್ಟೇ ಮೈಸೂರಿನ ರಂಗಾಯಣದಲ್ಲಿ ಆಯೋಜಿಸಿದ್ದ ‘ಅವಸಾನದತ್ತ ನೀ ಲಗಿರಿ ಕನ್ನಡಿಗರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬುಡಕಟ್ಟು ಸಮುದಾಯಗಳ ಸ್ಥಳಾಂತರ ಕುರಿತ ತಮ್ಮ ನೇತೃತ್ವದ ಹೈಕೋರ್ಟ್ ಸಮಿತಿ ವರದಿಯನ್ನು ಪ್ರಸ್ತಾಪಿಸಿದ್ದರು. ಅಸ್ಸಾದಿ ಅವರು ರುವಾಂಡಾ, ಅಫ್ಘಾನಿಸ್ತಾನ, ಇರಾನ್ ಮತ್ತು ಯುಕೆ ದೇಶಗಳ ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಮಾರ್ಗದರ್ಶನ ನೀಡಿದ್ದರು.