ಜಿಲ್ಲೆ

ಪ್ರೊ.ಎಂ.ಎಂ.ಕಲಬುರ್ಗಿಯವರ ಸಂಶೋಧನೆ ಕೆಲವರಿಗೆ ಇಷ್ಟವಾಗಲಿಲ್ಲ: ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಕಳವಳ

ಮೈಸೂರು: ಪ್ರಾಚೀನ ಸಾಹಿತ್ಯ, ಮಧ್ಯಯುಗದ ಸಾಹಿತ್ಯ ಕುರಿತು ಆಳವಾದ ಸಂಶೋಧನೆ ನಡೆಸಿದವರು ಪ್ರೊ.ಎಂ.ಎಂ.ಕಲಬುರ್ಗಿ ಅವರು. ಆದರೆ, ಇದು ಕೆಲವರಿಗೆ ಇಷ್ಟವಾಗಲಿಲ್ಲ. ಸಹಿಸಿಕೊಳ್ಳಲೂ ಆಗಲಿಲ್ಲ ಎಂದು ಹಿರಿಯ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಹೇಳಿದರು.

ನಗರದ ಮಾನಸಗಂಗೋತ್ರಿಯ ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ‘ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಪ್ರೊ.ಕಲಬುರ್ಗಿ ಉತ್ತಮ ಸಂಶೋಧಕರು. ಅವರ ಅಧ್ಯಯನ, ಸಂಶೋಧನೆಯು ಸಾಂಸ್ಕೃತಿಕ, ಸಾಹಿತ್ಯ ವಿಶ್ಲೇಷಣೆ, ಸಾಮಾಜಿಕ ವಿಮರ್ಶೆಯನ್ನು ಒಳಗೊಂಡಿದ್ದವು. ಈ ಚಟುವಟಿಕೆಯ ಮೂಲಕವೇ ಅವರು ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದರು. ಇದುವೇ ಅವರಿಗೆ ಮುಳುವಾಯಿತು ಎಂದರು.

ಸಂಶೋಧನೆ ಎಂಬುದು ಅಗ್ನಿಗರ್ಭವಿದ್ದಂತೆ

ಸಂಶೋಧನೆ ಎಂಬುದು ಅಗ್ನಿಗರ್ಭವಿದ್ದಂತೆ. ಈ ಕ್ಷೇತ್ರದಲ್ಲಿ ತೊಡಗಿರುವವರಿಗೆ ಸಮಾಧಾನಚಿತ್ತ ಬಹಳ ಅವಶ್ಯ. ಸಮಾಜದ ಅಗತ್ಯತೆ, ಉಪಯುಕ್ತತೆ, ಅಂತರಂಗ, ಬಹಿರಂಗಗಳಿಗೆ ಪ್ರಭಾವ ಬೀರುವ ಅಂಶಗಳನ್ನು ಸಂಶೋಧನೆಗಳು ಒಳಗೊಂಡಿರುತ್ತದೆ. ಸಂಶೋಧನೆಗಳು ನಿರ್ಭೀತಿಯಿಂದ ಕೂಡಿದ್ದು, ಅವುಗಳ ವ್ಯಾಖ್ಯಾನ ವಿಶ್ವಾಸದಿಂದ ಇರುತ್ತವೆ. ಈ ನೆಲೆಯಲ್ಲಿ ಪ್ರೊ.ಕಲಬುರ್ಗಿ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದ್ದರು ಎಂದು ಸ್ಮರಿಸಿದರು.

ಸಂಶೋಧನಾ ಕ್ಷೇತ್ರವು ಸೀಮಿತವಾದ ವಲಯ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹಳ ಕಡಿಮೆ. ಈ ಕ್ಷೇತ್ರವನ್ನು ಹಚ್ಚಿಕೊಳ್ಳುವವರೂ ವಿರಳವೇ. ಹೀಗಾಗಿ, ಎಲ್ಲರೂ ಒಟ್ಟಿಗೆ ತೊಡಗಿಕೊಳ್ಳುವುದು ಸೂಕ್ತ ಎಂದರು.

ಎಲ್ಲಿವರೆಗೆ ವ್ಯಕ್ತಿಯು ಜ್ಞಾಪಕದಲ್ಲಿ ಇರುತ್ತಾನೆ ಎಂದರೆ ಆತನ ಬರವಣಿಗೆಗಳು ಸತ್ವವಿರುವತನಕ. ವ್ಯಕ್ತಿಯ ಆಕಾರ, ಆತನ ಉಪನ್ಯಾಸಗಳು ಮರೆತು ಹೋಗಬಹುದು. ಆದರೆ, ಕಪ್ಪು ಬಿಳುಪಿನಲ್ಲಿ ಉಳಿಸಿ ಹೋಗುವ ಆತನ ಅಕ್ಷರಗಳು ಹೆಚ್ಚು ಕಾಲ ಜೀವಂತವಾಗಿರುತ್ತವೆ. ಇದೇ ಅವನು ಗಳಿಸಿಕೊಂಡ ಪರಮಾರ್ಥವಾಗಿರುತ್ತದೆ. ಆತನ ಕೃತಿಗಳು ಸೃಜನಶೀಲವಾಗಿದ್ದರೆ ಬಹಳಷ್ಟು ಜನರನ್ನು ತಲುಪುತ್ತದೆ ಎಂದು ಹೇಳಿದರು.

ಕಲುಬುರ್ಗಿ ಪ್ರಶಸ್ತಿಯನ್ನು ಪಡೆದುಕೊಂಡಿರುವ ಡಾ.ಎನ್.ಎಸ್.ತಾರಾನಾಥ ಸಾಂಸ್ಥಿಕವಾಗಿ ಬಹಳ ಕೆಲಸ ಮಾಡಿದ್ದಾರೆ. ಹೊರೆ ಹೊರುವವರಿಗೆ ಹೊರೆಯನ್ನು ಹೊರೆಸುವುದು ಜಾಸ್ತಿ. ತಾರಾನಾಥ ಕೂಡ ನಿಘಂಟಿನ ಕೆಲಸ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಮೂಲಾಧಾರಗಳನ್ನು ಕಟ್ಟುವ, ಗಟ್ಟಿಗೊಳಿಸುವ ಕಾರ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಸಂಶೋಧನೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದಲೇ ಅಪಾಯ

ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಸದಸ್ಯ, ಚಿಂತಕ ಡಾ.ಸಿದ್ದನಗೌಡ ಪಾಟೀಲ ಮಾತನಾಡಿ, ಕನ್ನಡ ಮತ್ತು ಬಸವ ಪ್ರಜ್ಞೆಯಾಗಿದ್ದ ಪ್ರೊ.ಕಲಬುರ್ಗಿ ಅವರು ಕಾಲ ಕೆಳಗಿನ ಬೆಂಕಿ ಮುಂದೆ ನಿಂತುಕೊಂಡು ಕಣ್ಮುಂದಿನ ಸತ್ಯ ಪ್ರತಿಪಾದಿಸಿದರು, ಅದಕ್ಕೆ ಹತ್ಯೆಯಾದರು. ರಿವಾಲ್ವಾರ್ ಕಾಲಘಟ್ಟದಲ್ಲಿ ಚಿಂತನೆ, ಆಲೋಚನೆ, ಸಮಾಜಮುಖಿ ವಿಚಾರ ಮಾಡುವುದೇ ಕಷ್ಟಕರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸೃಜನಶೀಲ ಸಂಶೋಧನೆಗೆ ರಾಷ್ಟ್ರೀಯ ಶಿಕ್ಷಣ ನೀತಿಯಿಂದಲೇ ಅಪಾಯ ಎದುರಾಗಿದೆ. ಪುರಾಣವೇ ಸಂಶೋಧನೆಯ ಆಕರಗಳಾಗುತ್ತಿವೆ. ಅಜ್ಞಾನ, ಮೌಢ್ಯ, ಮೂಢನಂಬಿಕೆ, ಪುರಾಣಗಳನ್ನೇ ಪಠ್ಯಕ್ರಮವಾಗಿ ಮಕ್ಕಳಿಗೆ ಒದಗಿಸಲಾಗುತ್ತಿದೆ. ಸತ್ಯ, ವೈಜ್ಞಾನಿಕತೆಯ ನೆಲೆಯಲ್ಲಿ ರೂಪಿತಗೊಂಡ ಪ್ರೊ.ಕಲಬುರ್ಗಿ ಸಂಪಾದಿಸಿರುವ ಅನೇಕ ಸಂಶೋಧನೆ ಕೃತಿಗಳು ಈಗ ಆಕರವಾಗುತ್ತಿಲ್ಲ. ಸಂಶೋಧನೆ ಸಹ ದಿಕ್ಕು ಬದಲಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಂಶೋಧನೆ ಇದೀಗ ಶಾಸ್ತ್ರೀಯ ಅಧ್ಯಯನವಾಗಿ ಉಳಿದಿಲ್ಲ. ಆ ಕೆಲಸವನ್ನು ಕೃತಕಬುದ್ಧಿಮತ್ತೆ(ಎಐ)ತಂತ್ರಜ್ಞಾನವೇ ಮಾಡಿಕೊಡುತ್ತದೆ. ಹೀಗಾಗಿ, ಇದು ಮಾನವ ಬೌದ್ಧಿಕ ಪ್ರಕ್ರಿಯೆಯಾಗಿ ಉಳಿದಿಲ್ಲ ಎಂದರು.

ಪ್ರೊ.ಕಲಬುರ್ಗಿ  ಸಮಾಜಮುಖಿ ಸಂಶೋಧಕರು.

ಅಸಮಾನತೆ, ಅಸ್ಪಶ್ಯತೆ, ನೋವು, ಅನ್ಯಾಯ ಒಪ್ಪದ ಪ್ರೊ.ಕಲಬುರ್ಗಿ ಅವರು ಪುಸ್ತಕ ಕೇಂದ್ರೀತ ಸಂಶೋಧಕರಲ್ಲ. ಅವರು ಸಮಾಜಮುಖಿ ಸಂಶೋಧಕರು. ಬಸವ ಸಾಹಿತ್ಯ, ಶರಣ ಚಳವಳಿ ಕುರಿತು ಆಳವಾಗಿ ಅಧ್ಯಯನ ಮಾಡಿದ್ದರು. ಜಾನಪದ, ನಾಟಕ, ಹಸ್ತಪ್ರತಿಯಲ್ಲೂ ಕೆಲಸ ಮಾಡಿದರು. ನಿರ್ಲಕ್ಷೃ ಸಾಹಿತ್ಯದಲ್ಲಿ ತೊಡಗಿದ್ದ ಅವರ ಸಂಶೋಧನೆ ಪಠ್ಯಕ್ರಮವಾಗಿ ರೂಪಿತಗೊಂಡಿವೆ ಎಂದು ಹೇಳಿದರು.

ಹಿರಿಯ ಸಂಶೋಧಕ ಡಾ.ಎನ್.ಎಸ್.ತಾರಾನಾಥ ಅವರಿಗೆ 2024ನೇ ಸಾಲಿನ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಪ್ರದಾನ ಮಾಡಿದರು.

ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಎನ್.ಕೆ.ಲೋಲಾಕ್ಷಿ, ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಎನ್.ಎಂ.ತಳವಾರ, ಪ್ರತಿಷ್ಠಾನದ ಸದಸ್ಯರಾದ ಶ್ರೀವಿಜಯ್ ಎಂ.ಕಲಬುರ್ಗಿ, ಹನುಮಾಕ್ಷಿ ಗೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಇದ್ದರು.