ಜಿಲ್ಲೆ

ಪ್ರೊ.ಅಸಾದಿ, ಡಿಸೋಜಾಗೆ ಸಿಗಲಿಲ್ಲ ಮನ್ನಣೆ

ಮೈಸೂರು: ರಾಜಕೀಯ ಚಿಂತಕ ಪ್ರೊ.ಮುಜಾಫರ್ ಅಸಾದಿ ಮತ್ತು ಸಾಹಿತಿ ನಾ.ಡಿಸೋಜ ಅವರಿಬ್ಬರ ಬರವಣಿಗೆಗೆ ಹೆಚ್ಚಿನ ಮನ್ನಣೆ ದೊರೆಯಲಿಲ್ಲ ಎಂದು ವಿಶ್ರಾಂತ ಕುಲಪತಿ, ಲೇಖಕಿ ಪ್ರೊ.ಸಬಿಹಾ ಭೂಮಿಗೌಡ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್,ಕನ್ನಡ ಸಾಹಿತ್ಯ ಕಲಾಕೂಟದ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಇಬ್ಬರಿಗೂ ಪ್ರತಿಭೆ ಇತ್ತು. ನಿರಂತರ ಪರಿಶ್ರಮದಿಂದ ಸಾಧನೆ ಮಾಡಿ ಮಾದರಿ ಎನಿಸಿಕೊಂಡವರು. ಆದರೆ, ಅವಕಾಶ, ಮನ್ನಣೆ ಸಿಗಲಿಲ್ಲ. ಇದು ನೋವಿನ ಸಂಗತಿ ಎಂದರು.

ಇಬ್ಬರಲ್ಲೂ ಹೋಲಿಕೆ ಇದೆ. ಸಮಾಜದ ಅಂಚಿನ ಅಲ್ಪಸಂಖ್ಯಾತ ಸಮುದಾಯದಿಂದ ಬಂದವರು. ಅವರಲ್ಲಿ ಅಬ್ಬರ ಕಾಣಲಿಲ್ಲ. ಹಿನ್ನೆಲೆಯಲ್ಲೇ ಉಳಿದುಕೊಂಡೇ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋದವರು. ಅವರಿಬ್ಬರೂ ಕರಾವಳಿಯವರು ಎಂದರು.

40 ಕಾದಂಬರಿ ಬರೆದಿರುವ ನಾ.ಡಿಸೋಜ ಅವರು ತಮ್ಮ ಕ್ರಿಶ್ಚಯನ್ ಸಮುದಾಯದ ಕುರಿತು ಬರೆದಿದ್ದು ಬಹಳ ಕಡಿಮೆಯೇ. ಹಿಂದು ಸಮಾಜದ ಕುರಿತು ಹೆಚ್ಚು ಬರೆದರು.

ಏನು ಬರೆಯಬೇಕು? ಏನು ಬರೆಯಬಾರದು? ಏನು ಬರೆದರೆ ಸಾಹಿತ್ಯಿಕ ಮೌಲ್ಯ ಬರುತ್ತದೆ ಎಂಬುದು ಇವರಿಗೆ ತಿಳಿದಿತ್ತು. ಹೀಗಾಗಿ, ಮನುಷ್ಯ ಸಂಬಂಧಗಳು, ಪ್ರಕೃತಿ, ಪರಿಸರ ನಾಶದ ಪರಿಣಾಮಗಳು, ಬದುಕಿನ ಸಂಬಂಧಗಳ ಕುರಿತು ಹೆಚ್ಚು ಬರೆದರು. ಜತೆಗೆ, ತಮ್ಮ ಬದುಕಿನ ಮೂಲಕವೇ ಸಂದೇಶವನ್ನೂ ಕೊಟ್ಟು ಹೋದರು ಎಂದು ಸ್ಮರಿಸಿದರು.

ಪ್ರೊ.ಅಸಾದಿ ಅವರು ಪ್ರಖರ ರಾಜಕೀಯ, ಸಾಮಾಜಿಕ ಚಿಂತಕರು. ಬಹಳ ಕ್ರಿಯಾಶೀಲ ಪ್ರತಿಭೆ ಅವರು. ಸಮುದಾಯದ ಅಸ್ಮಿತೆಯಾಗಿ ರೈತರ, ಮಹಿಳೆ ಕುರಿತು ಚಿಂತಿಸಿದರು, ಅದೇ ರೀತಿ ಬರೆದರು. ಅವರಿಂದ ನಾವುಗಳು ವಿನಯವಂತಿಕೆ ಕಲಿಯಬೇಕಿದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಹೊಂಬಾಳ್ ಮಾತನಾಡಿ, ಪರಿಶ್ರಮದಿಂದ ಬೆಳೆಯಬಹುದು ಎಂಬುದಕ್ಕೆ ಉತ್ತಮ ನಿದರ್ಶನ ಪ್ರೊ.ಅಸಾದಿ ಅವರು. ಬಾಲ್ಯದಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಅವರು ನನಗೆ ಓದಿನ ದೀಕ್ಷೆಯನ್ನು ಅಮ್ಮ ಕೊಟ್ಟು ಹೋಗಿದ್ದಾರೆ ಎನ್ನುತ್ತಾ ತಮ್ಮ ಸಾಹಿತ್ಯ ಕೃಷಿಯಲ್ಲಿ ತಾಯಿಯನ್ನು ಕಾಣುತ್ತಿದ್ದದ್ದು ವಿಶೇಷವಾಗಿತ್ತು. ಈ ದೀಕ್ಷೆ ಅವರನ್ನು ಈ ಮಟ್ಟಿಗೆ ಬೆಳೆಸಿತು ಎಂದರು.

ಮಾನವೀಯತೆಗೆ ಮಿಡಿಯುವ ಮನಸ್ಸು, ವೈಜ್ಞಾನಿಕ, ವೈಚಾರಿಕ ಚಿಂತನೆಗಳು ಹಾಗೂ ಸಂವಿಧಾನದ ಆಶಯವನ್ನು ವಿಶ್ವವಿದ್ಯಾಲಯಗಳಲ್ಲಿ ಬಿತ್ತುವ ಆಶಯ ಅವರಲ್ಲಿತ್ತು. ಬರವಣಿಗೆ ಸಮಾಜದ ಬದಲಾವಣೆಗೆ ಕಾರಣವಾಗಬೇಕು ಎಂಬ ಅವರ ಉದ್ದೇಶವಾಗಿತ್ತು. ಈ ನಿಟ್ಟಿನಲ್ಲಿ ಸಕಾರಾತ್ಮಕ ಪರಿವರ್ತನೆಗಾಗಿ ಅಮೂಲಾಗ್ರವಾಗಿ ಚಿಂತನೆಯೊಂದಿಗೆ ಬರೆದರು. ಅದರ ಫಲವಾಗಿ ರೈತರ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ, ಬುಡಕಟ್ಟು ಚಳವಳಿಯ ನಿರೂಪಿಸಲು ಪ್ರಯತ್ನಿಸಿದರು ಎಂದರು.

ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಅಸಾದಿ ಹಾಗೂ ಡಿಸೋಜ ಅವರು ಗೆಳೆಯರಾದಗಿದ್ದರು. ನಾವು ಹೆಮ್ಮೆ ಪಡುವಂತಹ ವ್ಯಕ್ತಿತ್ವ ಅವರಿಬ್ಬರದು. ಸರ್ವಜನಾಂಗದ ಶಾಂತಿಯ ತೋಟ ಎಂಬುದರಲ್ಲಿ ಅಸಾದಿ ಅವರಿಗೆ ದೊರೆಯಬೇಕಾದ ಸ್ಥಾನಮಾನ ದೊರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಇಬ್ಬರೂ ಮಹನೀಯರು ಬಹಳ ಓದಿಕೊಂಡವರು. ಹಿರಿಯರಾದ ಡಿಸೋಜ ಅವರಿಂದ ನಾವು ಕಲಿತದ್ದು ಜಾಸ್ತಿ. ಸಣ್ಣ ಗುಮಾಸ್ತರಾಗಿದ್ದ ಅವರು ಮಲೆನಾಡಿನಲ್ಲಿ ಮಾತ್ರವಲ್ಲದೆ ಇಡೀ ನಾಡಿನ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಲವು ಹೋರಾಟಗಳಲ್ಲೂ ಭಾಗಿಯಾಗಿದ್ದರು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್(ಜನ್ನಿ), ಪ್ರಗತಿ ಪರ ಚಿಂತಕಿ ಸವಿತಾ ಪ.ಮಲ್ಲೇಶ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಜಿ.ಟಿ.ರಾಮಚಂದ್ರಪ್ಪ, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್ ಉಪ್ಪಾರ ಹಾಗೂ ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಇನ್ನಿತರರಿದ್ದರು.