ಜಿಲ್ಲೆ

ಪ್ರೊ.ಅನ್ನಪೂರ್ಣಮ್ಮ ವರದಿ ಶಿಫಾರಸಿಗೆ ಪ್ರಯತ್ನ: ರಾಜ್ಯ ಮಡಿವಾಳರ ಜಾಗೃತಿ ಸಮಾವೇಶದಲ್ಲಿ ಸಿದ್ದರಾಮಯ್ಯ ಹೇಳಿಕೆ

Tumakuru

ತುಮಕೂರು: ನಮ್ಮ ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ಪ್ರೊ.ಅನ್ನಪೂರ್ಣಮ್ಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇವೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರ ಹೊರವಲಯದ ಹೆಗ್ಗರೆಯಲ್ಲಿ ರಾಜ್ಯ ಮಡಿವಾಳ ಸಮಾಜದಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಡಿವಾಳರ ಬೃಹತ್​ ಜಾಗೃತಿ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 18 ರಾಜ್ಯಗಳಲ್ಲಿ, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮಾಜದವರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ನ್ಯಾಯಯುತ ಬೇಡಿಕೆ ಈಡೇರಿಸಲು ಕಾಂಗ್ರೆಸ್​ ಬದ್ಧವಿದೆ ಎಂದರು.

ಸಮಾಜದಲ್ಲಿ ಎಲ್ಲಿಯವರೆಗೆ ಅಸಮಾನತೆ, ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಅನಿರ್ವಾಯ. ಮೀಸಲಾತಿ ಇಲ್ಲದಿದ್ದರೆ ರಾಜಕೀಯ ಅಧಿಕಾರ ಸಿಗಲ್ಲ. ಯಾರು ಮೀಸಲಾತಿ ಪರವಾಗಿದ್ದರೊ ಅವರ ಪರವಾಗಿ ನಿಲ್ಲದೆ ಹೋದರೆ ಸಾಮಾಜಿಕ ನ್ಯಾಯ ಮರೀಚಿಕೆ ಆಗಲಿದೆ. ಸಾಮಾಜಿಕ ನ್ಯಾಯ ಸಿಗದೇ ಹೋದರೆ ಸಮಾನತೆ ಸಿಗಲ್ಲ. ರಾಜಕೀಯ ಅಧಿಕಾರ ಸಿಗದೆ ಹೋದರೆ ಯಾವ ಜಾತಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು.

ಈ ಸರ್ಕಾರ ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆ ಮಾಡಿಲ್ಲ. ಬಿಜೆಪಿಯು ವಿಳಂಬ ಮಾಡಿದ್ದರಿಂದ ಹಿಂದುಳಿದ ವರ್ಗಗಳು ರಾಜಕೀಯ ಅಧಿಕಾರದಿಂದ ವಂಚಿತರಾಗುವಂತಾಗಿದೆ. ಸುಪ್ರೀಂಕೋರ್ಟ್​ ಸೂಚನೆ ನೀಡಿದೆಯಾದರೂ ಚುನಾವಣೆ ನಡೆಸಲು ಮೀನಮೇಷ ಎಣಿಸಲಾಗುತ್ತಿದೆ. ಮುಂದಿನ ಚುನಾವಣೆಗಳಲ್ಲಿ ಇಂತಹ ಮೀಸಲಾತಿ ವಿರೋಧಿಗಳನ್ನು ಧಿಕ್ಕರಿಸಿ ಎಂದರು.

ರಾಜಕೀಯ ಪ್ರಾತಿನಿಧ್ಯಕ್ಕೆ ಒತ್ತಾಯ ಮಾಡಿದ್ದೀರಾ. ನಾನು ಮುಖ್ಯಮಂತ್ರಿ ಆಗಿದ್ದಾಗ ಅನೇಕರನ್ನು ಗುರುತಿಸಿ ಅಧ್ಯರನ್ನಾಗಿ ಮಾಡಿದ್ದೇನೆ. ಕೆಂಪರಾಜು ಅವರನ್ನು ವಿಸಿ ಮಾಡಿದೆ. ಮಾಚಿದೇವ ಜಯಂತಿ ೂಷಿಸಿದ್ದು ದೇವರಹಿಪ್ಪರಿಗೆ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗ ಈ ಸಮಾಜವನ್ನು ಗುರುತಿಸಿ, ರಾಜಕೀಯ ಅಧಿಕಾರ ನೀಡಲಾಗಿದೆ. ನಿಮ್ಮಗಳ ಕೋರಿಕೆಯಂತೆ ವಿಧಾನಪರಿಷತ್​ ಸದಸ್ಯರ ಜತೆಗೆ, ಗೋಪಿಕೃಷ್ಣನಿಗೆ ವಿಧಾನಸಭೆಯ ಟಿಕೆಟ್​ ನೀಡುವ ಕುರಿತು ವರಿಷ್ಠರ ಜತೆ ಚರ್ಚಿಸುವೆ ಎಂದು ಸಿದ್ದರಾಮಯ್ಯ ಭರವಸೆಯಿತ್ತರು.

ಬೇಡಿಕೆ ಈಡೇರಿಸಲು ಬದ್ಧ: ಅವಕಾಶದಿಂದ ವಂಚಿತರಾದವರಿಗೆ ನ್ಯಾಯ ಸಿಗಬೇಕಾದರೆ ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಅವುಗಳನ್ನು ಮುಂಚೂಣಿಗೆ ತರಬೇಕಾದ್ದು ಸರ್ಕಾರದ ಕೆಲಸ. ದಲಿತ, ಶೋಷಿತ ವರ್ಗಗಳಿಗೆ ಬಾಬಾ ಸಾಹೇಬರ ಕಡ್ಡಾಯ ಶಿಕ್ಷಣ, ಸಂಟನೆ, ಹೋರಾಟ ಮೂರು ಮಂತ್ರಗಳಾಗಬೇಕು. ಯಾವ ವೃತ್ತಿಗಳೂ ಕೀಳಲ್ಲ. ವೃತ್ತಿಗಳೇ ಜಾತಿಗಳಾಗಿ ಹಲವು ಸಮಸ್ಯೆಗಳಿಗೆ ಕಾರಣವಾಗಿವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ನನಗೆ ಸ್ವರ್ಗ, ನರಕದ ಬಗ್ಗೆ ನಂಬಿಕೆಯಿಲ್ಲ. ಶರಣರು ತಿಳಿಸಿದಂತೆ ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ನಡೆದುಕೊಂಡವನು ನಾವು, ಮನುಷ್ಯರು ಎಂದು ತಿಳಿದು ಸಮಾನ ಗೌರವದಿಂದ ಬದುಕುವುದನ್ನು ಕಲಿಯೋಣ. ನಿಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು.

ರಾಜಕೀಯ ಶಕ್ತಿ ಕೊಟ್ಟಿದ್ದೇವೆ: ಮಡಿವಾಳ ಸಮುದಾಯಕ್ಕೆ ರಾಜಕೀಯ ಶಕ್ತಿ ಕೊಟ್ಟಿದ್ದೀವಿ. ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ ಇದೆ. ಅದನ್ನು ನಾನು ಸಿದ್ದರಾಮಯ್ಯ, ವರಿಷ್ಠರು ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯ ಡಿ.ಕೆ.ಶಿವಕುಮಾರ್​ ಭರವಸೆ ನೀಡಿದರು. ನಾನು ಹಲವು ವರ್ಷಗಳಿಂದ ಹತ್ತಿರದಿಂದ ಸಮಾಜವನ್ನು ನೋಡಿದ್ದೇನೆ. ಸಮಾಜದ ಕೊಳೆ ತೊಳೆಯುವ ಕೆಲಸವನ್ನು ಮಾಡುತ್ತಿದೆ. ಯಾವ ವೃತ್ತಿಯೂ ಕೀಳಲ್ಲ. ವಿಷ ಸರ್ಪ ಸೇರಿರುವ ಹುತ್ತವನ್ನೇ ದೇವರೆಂದು ಪೂಜಿಸುವ ಸಂಸತಿ ನಮ್ಮದು. ಈ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಕಾಂಗ್ರೆಸ್​ ಎಲ್ಲ ಶ್ರಮಜೀವಿಗಳ ಜತೆ ಇದೆ, ಮುಂದೆಯೂ ಇರುತ್ತದೆ ಎಂದರು. ಮಾಜಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಟಿ.ಬಿ.ಜಯಚಂದ್ರ, ಎಚ್​.ಎಂ.ರೇವಣ್ಣ, ಮಾಜಿ ಸಂಸದ ಬಿ.ಎನ್​.ಚಂದ್ರಪ್ಪ, ಶಾಸಕರಾದ ವೆಂಕಟರವಣಪ್ಪ, ಡಾ.ಎಚ್​.ಡಿ.ರಂಗನಾಥ್​, ವಿಧಾನ ಪರಿಷತ್​ ಸದಸ್ಯ ಆರ್​.ರಾಜೇಂದ್ರ, ಮುಖಂಡರಾದ ಗೋಪಿಕೃಷ್ಣ, ನಾಗರಾಜು, ಮಳವಳ್ಳಿ ಶಿವಣ್ಣ, ವೆಂಕಟರಮಣಸ್ವಾಮಿ, ಅಮರನಾಥ್​ , ಶಾಂತಕುಮಾರ್​, ಕೆಂಪನರಸಯ್ಯ ಇದ್ದರು.

ಮಾಚಿದೇವ ಅಭಿವೃದ್ಧಿ ನಿಗಮಕ್ಕೆ ಈವರೆಗೆ ಅಧ್ಯಕ್ಷರನ್ನು ನೇಮಿಸಲು ಬಿಜೆಪಿ ಸರ್ಕಾರಕ್ಕೆ ಆಗಿಲ್ಲ. ಒಂದು ಇಸಿ ಪೆಟ್ಟಿಗೆ ಕೊಳ್ಳಲು ನಮ್ಮಲ್ಲಿ ಶಕ್ತಿ ಇಲ್ಲ. ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆಬಾಗಿಲಿಗೆ ಹತ್ತಾರು ಬಾರಿ ಅಲೆದರೂ ಪ್ರಯೋಜನವಾಗಿಲ್ಲ. ನಮ್ಮನ್ನು ಯಾರು ಗುರುತಿಸಿ, ಸಹಕಾರ ನೀಡಿದ್ದಾರೊ, ಅವರ ಹಿಂದೆ ಹೋಗುವುದು ನಮ್ಮ ಧರ್ಮ. ಹಾಗಾಗಿ, ಕಾಂಗ್ರೆಸ್​ ಜತೆ ಸೇರಿ ಈ ಸಮಾವೇಶ ನಡೆಸುತ್ತಿದ್ದೇವೆ. ನಿಮಗೂ (ಬಿಜೆಪಿ) ನಮ್ಮ ಬಗ್ಗೆ ಕಾಳಜಿ ಇದ್ದರೆ ಮೊದಲು ಪರಿಶಿಷ್ಟ ಜಾತಿ ಪಟ್ಟಿಗೆ ನಮ್ಮನ್ನು ಸೇರಿಸಲು ಶಿಫಾರಸು ಕಳುಹಿಸಿ. ನಿಮ್ಮ ಜತೆಯೂ ಸಮಾವೇಶ ಮಾಡುತ್ತೇವೆ ಎಂದು ರಾಜ್ಯ ಮಡಿವಾಳ ಸಮಾಜದ ಅಧ್ಯಕ್ಷ ಸಿ.ನಂಜಪ್ಪ ಹೇಳಿದರು.

ಸಿದ್ದರಾಮಯ್ಯರ ಕೈ ಬಲಪಡಿಸಿ: ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯನವರ ಕೈ ಬಲಪಡಿಸುವ ಮೂಲಕ ನೀವು ರಾಜಕೀಯ ಅಧಿಕಾರ ಪಡೆದುಕೊಳ್ಳಬೇಕು. ತಳ ಸಮುದಾಯಗಳಿಗೆ ನ್ಯಾಯ ಕೊಡಿಸುವ ಪ ಇದ್ದರೆ ಅದು ಕಾಂಗ್ರೆಸ್​ ಮಾತ್ರ. ಸಿದ್ದರಾಮಯ್ಯ ಅಂತಹ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ ಎಂದು ಮಾಜಿ ಶಾಸಕ ಕೆ.ಎನ್​.ರಾಜಣ್ಣ ಹೇಳುವ ಮೂಲಕ ಸಿದ್ದರಾಮಯ್ಯ ಪರ ನಿಷ್ಠೆ ಪ್ರದರ್ಶಿಸಿದರು. ಕೆಲ ನಾಯಕರು ನಾವು ಕೆಳ ವರ್ಗದವರು ಅಂತಾ ಕರೆದುಕೊಳ್ಳೊತ್ತಾರೆ. ಹಾಗೇನಾದ್ರೂ ಕರೆದುಕೊಂಡರೆ ಮುಂದೆ ಅವರ ವಿರುದ್ಧ ಪ್ರತಿಭಟನೆ ಮಾಡುತ್ತೇನೆ. ಮೇಲ್ವರ್ಗದವರು ಮೇಲಿಂದ ಇಳಿದಿಲ್ಲ. ನಾವೆಲ್ಲಾ ಏನು ಪಾತಾಳದಿಂದ ಬಂದಿಲ್ಲ. ಕೆಳವರ್ಗ ಅಂತ ನಮ್ಮನ್ನು ಸಂಬೋಧಿಸಬಾರದು. ಹಿಂದುಳಿದ, ಅಹಿಂದ ಏನಾದರೂ ಕರೆಯಲಿ. ಕೆಳವರ್ಗ, ಮೇಲ್ವರ್ಗ ಅಂತ ಭೇದಭಾವ ಮಾಡಬಾರದು ಎಂದರು.

ಮಡಿವಾಳ ಜನಾಂಗಕ್ಕೆ ಎಂಎಲ್ಸಿ ಸ್ಥಾನ ಸಿಗಬೇಕಿತ್ತು. ನಾವು ಅಧಿಕಾರಕ್ಕೆ ಬಂದರೆ ಮೇಲ್ಮನೆ, ಕೆಳಮನೆಯಲ್ಲಿ ಪ್ರಾತಿನಿಧ್ಯ ಕೊಡುತ್ತೇವೆ. ನಾನು ಅಧಿಕಾರದಲ್ಲಿ ಇರಲಿ, ಇರದೆ ಹೋಗಲಿ ಯಾವತ್ತೂ ಹಿಂದುಳಿದ ವರ್ಗಗಳ ಪರವಾಗಿ ನಿಲ್ಲುತ್ತೇನೆ. > ಸಿದ್ದರಾಮಯ್ಯ ವಿಪಕ್ಷ ನಾಯಕ