ಜಿಲ್ಲೆ

ಪ್ರೇಯಸಿಯೊಂದಿಗೆ ಐಷಾರಾಮಿಯಾಗಿರಲು ಕಳ್ಳತನ ಮಾಡಿ ಪೊಲೀಸರ ಅತಿಥಿಯಾದ!

ಆನೇಕಲ್: ಪ್ರೇಯಸಿಯೊಂದಿಗೆ ಐಷಾರಾಮಿ ಜೀವನ ನಡೆಸಲು ಮನೆಗಳಲ್ಲಿ ಕಳವು ಮಾಡುತ್ತಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಸರ್ಜಾಪುರ ಸಮೀಪದ ಚಿಕ್ಕದಾಸರಹಳ್ಳಿಯ ಲಕ್ಷ್ಮಣ (38) ಬಂಧಿತ. ವಾಪಸಂದ್ರದಲ್ಲಿ ಮಾ.27ರಂದು ಗೋಪಾಲಸ್ವಾಮಿ ಎಂಬುವರ ಮನೆಯಲ್ಲಿ ಏಳು ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಕಳವಾಗಿತ್ತು. ಈ ಬಗ್ಗೆ ಜಿಗಣಿ ಠಾಣೆಯಲ್ಲಿ ಮನೆ ಮಾಲೀಕರು ದೂರು ದಾಖಲಿಸಿದ್ದರು. ಕಳ್ಳನ ಬಂಧನಕ್ಕೆ ಬಲೆ ಬೀಸಿದ್ದ ಜಿಗಣಿ ಪೊಲೀಸರು, ಹಲವು ಸಿಸಿಟಿವಿ ಪರಿಶೀಲನೆ ಮಾಡಿದ್ದರಾದರೂ ಸುಳಿವು ಸಿಕ್ಕಿರಲಿಲ್ಲ. ಆದರೆ, ಬೇರೆ ಬೇರೆ ಠಾಣೆಗಳಲ್ಲಿ ಮನೆಕಳವು ಮಾಡಿದ್ದ ಆರೋಪಿಗಳ ಮಾಹಿತಿ ಕಲೆ ಹಾಕಿ, ಸಿಸಿಟಿವಿ ದೃಶ್ಯಾವಳಿಗೆ ಹೋಲಿಕೆಯಾಗಿದ್ದು, ಅ.23ರಂದು ಅತ್ತಿಬೆಲೆಯಲ್ಲಿ ಇರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದ್ದು, ಆರೋಪಿ ವಿರುದ್ಧ ಬನ್ನೇರುಘಟ್ಟ, ಜಿಗಣಿ, ಅತ್ತಿಬೆಲೆ ಮತ್ತು ಸೂರ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೂರುಗಳಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಈತನ ವಿರುದ್ಧ ಸುಮಾರು 23 ಮನೆಗಳಲ್ಲಿ ಕಳವು ಪ್ರಕರಣ ದಾಖಲಾಗಿದೆ, ಕಳವು ಮಾಡಿದ ಚಿನ್ನ ಹಾಗೂ ಬೆಳ್ಳಿ ಆಭರಣವನ್ನು ಮಾರಾಟ ಮಾಡಿ ಪ್ರೇಯಸಿಯೊಂದಿಗೆ ಐಷಾರಾಮಿ ಜೀವನ ನಡೆಸುತ್ತಿದ್ದ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಜಿಗಣಿ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಕ್ರೈಂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.