ಆನೇಕಲ್: ಪ್ರೇಯಸಿ ತಾಯಿಗಾಗಿ ಸರ ಕಳವಿಗಿಳಿದಿದ್ದ ಡಾನ್ಸ್ ಮಾಸ್ಟರ್ ಜಿಗಣಿ ಪೊಲೀಸರ ಅತಿಥಿಯಾಗಿದ್ದಾನೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ನಿವಾಸಿ ಸೈಯದ್ ಅಲಿ ಬಾಳ ಸಾಹೇಬ್ ನದಾಫ್(25) ಬಂಧಿತ. ಆಗಸ್ಟ್‌ನಲ್ಲಿ ಜಿಗಣಿಯ ಸತ್ತಾರ್ ಸಾಬ್ ದಿಣ್ಣೆಯ ತನ್ನಮ್ಮ ಎಂಬುವವರ ಮಾಂಗಲ್ಯ ಸರವನ್ನು ಖದೀಮನೊಬ್ಬ ಕಿತ್ತುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಜಿಗಣಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಿಗಣಿ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ತಂಡ ರಚನೆ ಮಾಡಿ ಘಟನೆ ನಡೆದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯ ಬಂಧನಕ್ಕೆ ಬಲೆ ಬೀಸಿದಾಗ ಬೆಂಗಳೂರಿನ ಜೆ.ಪಿ.ನಗರದ ಬಾಡಿಗೆ ಮನೆಯಲ್ಲಿ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ 8 ಲಕ್ಷ ಮೌಲ್ಯದ ಚಿನ್ನಾಭರಣ, 2 ಬೈಕ್ ವಶಕ್ಕೆ ಪಡೆಯಲಾಗಿದೆ. ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದ: ಈ ಹಿಂದೆಯೇ ಪ್ರಕರಣ ಒಂದರಲ್ಲಿ ಗದಗದಲ್ಲಿ ಬಂಧಿತನಾಗಿದ್ದ ಈತ ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿ ಗದಗ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿ ಅಮಾನತಾಗಲು ಕಾರಣನಾಗಿದ್ದ.
ಗೆಳತಿಗಾಗಿ ಕಳ್ಳತನ: ಪೊಲೀಸರು ನದಾಫ್‌ನನ್ನು ಬಂಧಿಸಿ ತನಿಖೆ ನಡೆಸಿದಾಗ ಈತನ ಪ್ರೇಯಸಿಯ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಹಣ ಹೊಂದಿಸಲು ಈತ ಸರಗಳ್ಳತನಕ್ಕೆ ಇಳಿದಿದ್ದ ಎಂದು ತಿಳಿದುಬಂದಿದೆ. ಪ್ರೇಯಸಿಯ ಖರ್ಚು ವೆಚ್ಚಗಳನ್ನು ಈತನೇ ನೋಡಿಕೊಳ್ಳುತ್ತಿದ್ದ. ಒಮ್ಮೆ ಕದ್ದು ಹಣ ಖಾಲಿಯಾಗುತ್ತಿದ್ದಂತೆ ಮತ್ತೆ ಬೈಕ್ ಕಳ್ಳತನ ಹಾಗೂ ಸರಗಳವು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಹೀಗಾಗಿ ಈತನ ವಿರುದ್ಧ ಬೆಂಗಳೂರು ನಗರ, ಹುಳಿಮಾವು, ಜೆಪಿ ನಗರ, ಬಾಗಲಕುಂಟೆ, ತುಮಕೂರು, ರಾಮನಗರ, ದಾವಣಗೆರೆ ಸೇರಿ ಹಲವು ಕಡೆ 8 ದ್ವಿಚಕ್ರ ವಾಹನ ಮತ್ತು ಚಿನ್ನದ ಸರ ಸುಲಿಗೆ ಪ್ರಕರಣ ದಾಖಲಾಗಿವೆ.
ತಂಡಕ್ಕೆ ಅಭಿನಂದನೆ: ಆರೋಪಿ ಬಂಧನದ ಕಾರ್ಯಾಚರಣೆಯಲ್ಲಿದ್ದ ಜಿಗಣಿ ಠಾಣೆ ಇನ್‌ಸ್ಪೆಕ್ಟರ್ ಬಿ.ಎಸ್.ಮಂಜುನಾಥ್, ಸಿಪಿಐಗಳಾದ ಶಿವಲಿಂಗ ನಾಯಕ್, ಶಬಾನಾ ಯಾಸೀನ್ ಮಕನಾದಾರ್, ಕ್ರೈಂ ಸಿಬ್ಬಂದಿ ಆನಂದ, ಪರ್ವೇಜ್ ಪಾಷಾ, ವೆಂಕಟೇಶ್, ಚನ್ನಬಸವ ನಾಯಕ್, ಮಂಜುನಾಥ್, ಗುರುರಾಜ ಅವರನ್ನು ಜಿಲ್ಲಾ ಎಸ್‌ಪಿ ಸಿ.ಕೆ.ಬಾಬಾ ಸನ್ಮಾನಿಸಿದರು.