ಮೈಸೂರು: ನಗರದ ಖಾಸಗಿ ಹೋಟೆಲ್ ರೂಮ್‌ನಲ್ಲಿ ನಿಗೂಢವಾಗಿ ಯುವತಿ ಕೊಲೆಯಾದ ಪ್ರಕರಣದಕ್ಕೆ ಸಂಬಂಧಿಸಿದಂತೆ ಪೊಲಿಸರು ಪ್ರಿಯಕರನನ್ನು ಬಂಧಿಸಿದ್ದಾರೆ.
ಪ್ರಿಯಕರ ಹಿನಕಲ್‌ನ ವಾಸಿ ಆಶಿಕ್ (28) ಬಂಧಿತ ಆರೋಪಿ. ಬಂಧನಕ್ಕೂ ಮುನ್ನಾ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದು, ಮೊಬೈಲ್ ಟವರ್ ಲೊಕೇಷನ್ ಮೇಲೆ ಕಾರ್ಯಾಚರಣೆ ನಡೆಸಿದ ದೇವರಾಜ ಠಾಣೆ ಪೊಲೀಸರು, ಪಿರಿಯಾಪಟ್ಟಣದ ಕಂಪ್ಲಾಪುರ ಬಳಿ ವಶಕ್ಕೆ ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ರೂಮ್ ಪಡೆದು ಉಳಿದುಕೊಂಡಿದ್ದ ಆಶಿಕ್ ಎರಡು ದಿನಗಳ ಹಿಂದೆ ಪ್ರೇಯಸಿ ಅಪೂರ್ವಶೆಟ್ಟಿ (21) ಅನ್ನು ಕೊಠಡಿಯಲ್ಲಿಯೇ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದನೆನ್ನಲಾಗಿದೆ. ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಅಪೂರ್ವಶೆಟ್ಟಿ ಹಾಗೂ ಆಶಿಕ್ ನಡುವಿನ ಪ್ರೀತಿ ವಿಷಯ ಒಂದು ವರ್ಷದ ಹಿಂದೆ ಮನೆಯಲ್ಲಿ ತಿಳಿದು ಗಲಾಟೆ ನಡೆದಿದ್ದಲ್ಲದೇ ಇಬ್ಬರಿಗೂ ದೊಡ್ಡವರು ಬುದ್ದಿ ಮಾತು ಹೇಳಿದ್ದರೆನ್ನಲಾಗಿದೆ. ಆದರೂ ಇಬ್ಬರೂ ಪ್ರೀತಿ ಮುಂದುವರಿಸಿದ್ದು, ಅಪೂರ್ವಶೆಟ್ಟಿಗೆ ಕೆಲ ದಿನಗಳಲ್ಲಿ ಪರೀಕ್ಷೆ ಮುಗಿದು ಊರಿಗೆ ಮರಳಬೇಕಿತ್ತು. ಹೀಗಾಗಿ ಹೋಟೆಲ್‌ನಲ್ಲಿ ಇಬ್ಬರು ಒಟ್ಟಿಗೆ ತಂಗಿದ್ದ ಸಮಯದಲ್ಲಿ ಜಗಳ ನಡುವೆ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.