ತಿಪಟೂರು: ಯುವತಿಯನ್ನು ಮದುವೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದವನನ್ನು ಹುಡುಗಿಯ ತಂದೆಯೇ ಕೊಲೆ ಮಾಡಿದ್ದಾನೆ. ಶಂಕರನಗರದ ವಾಸಿ ಚೇತನ್ (25) ಮೃತ. ಆಲೂರು ಗ್ರಾಮದ ಲೋಕೇಶ್ ಆರೋಪಿ.
ಏನಿದು ಟನೆ: ಪತ್ನಿಯಿಂದ ದೂರವಿದ್ದ ಚೇತನ್, ಆಲೂರು ಗ್ರಾಮದ ಲೋಕೇಶ್ ಅವರ ಪುತ್ರಿ ಹಿಂದೆ ಬಿದ್ದು ಪ್ರೀತಿಸುವಂತೆ ಪೀಡಿಸುತ್ತಿದ್ದ. ಹಾಗೆಯೇ ಇತ್ತೀಚೆಗೆ ಮದುವೆ ಮಾಡಿಕೊಡುವಂತೆ ಪಾಲಕರ ಬಳಿ ಪದೇ ಪದೆ ಕೇಳುತ್ತಿದ್ದ. ಇದರಿಂದ ರೋಸಿಹೋಗಿದ್ದ ಯುವತಿ ತಂದೆ ಲೋಕೇಶ್ ನಗರದ ಹೊರವಲಯದ ಹಾಲ್ಕುರಿಕೆ ರಸ್ತೆ ಬಳಿ ಶನಿವಾರ ರಾತ್ರಿ ಮಾರಕ ಅಸ್ತ್ರದಿಂದ ಹೊಡೆದು ಕೊಲೆ ಮಾಡಿದ್ದಾರೆ. ಚೇತನ್ ಶಿವಮೊಗ್ಗ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಕೌಟುಂಬಿಕ ಕಲಹದಿಂದ ಪತ್ನಿ ದೂರವಾಗಿದ್ದ ಹಿನ್ನೆಲೆಯಲ್ಲಿ ಲೋಕೇಶ್ ಅವರ ಪುತ್ರಿ ಹಿಂದೆ ಬಿದ್ದಿದ್ದ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಡಿಎಸ್ಪಿ ವಿನಾಯಕ ಶೇಟಗೇರಿ, ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಹೊನ್ನವಳ್ಳಿ ಇನ್ಸ್ಪೆಕ್ಟರ್ ರಾಜೇಶ್ ಸ್ಥಳ ಪರಿಶೀಲನೆ ಮಾಡಿದ್ದು, ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.