ಹನೂರು: ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಅವರನ್ನು ಗೆಲ್ಲಿಸಿದರೆ 4 ಎಂಎಲ್‌ಎಗಳನ್ನು ಗೆಲ್ಲಿಸಿದಂತಾಗುತ್ತದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ತಿಳಿಸಿದರು.
ಹನೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಶ್ರೀ ಮಹದೇಶ್ವರರು, ಮಂಟೇಸ್ವಾಮಿ, ಚಿಕ್ಕಲ್ಲೂರು ಸಿದ್ದಪ್ಪಾಜಿ, ಸಾಲೂರು ಹಾಗೂ ಸುತ್ತೂರು ಮಠಕ್ಕೆ ನಮಸ್ಕರಿಸುತ್ತಾ ಮಾತು ಪ್ರಾರಂಭಿಸಿದರು.
ಈ ನಾಡು ಬಸವೇಶ್ವರರ ಪುಣ್ಯ ಭೂಮಿ. ಇಲ್ಲಿಂದಲೇ ಅವರು ಇಡೀ ಪ್ರಪಂಚದಾದ್ಯಂತ ಸಂಚಾರ ಪ್ರಾರಂಭಿಸಿ, ಸಮಾಜದ ಉದ್ಧಾರಕ್ಕೆ ಶ್ರಮಿಸಿದರು. ಯಾವುದೇ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಎಂಎಲ್‌ಎ ಆಗುತ್ತಾರೆ. ಆದರೆ ಹನೂರಿನಲ್ಲಿ ಈ ಬಾರಿ ದತ್ತೇಶ್‌ಕುಮಾರ್, ವೆಂಕಟೇಶ್, ನಿಶಾಂತ್ ಹಾಗೂ ಪ್ರೀತನ್ ನಾಗಪ್ಪ ಈ ನಾಲ್ವರು ಸೇರಿಕೊಂಡು ಕಮಲ ಅರಳಿಸಲಿದ್ದಾರೆ. ಹಾಗಾಗಿ ಪ್ರೀತನ್‌ರನ್ನು ಗೆಲ್ಲಿಸಿದರೆ ಇವರನ್ನೆಲ್ಲ ಗೆಲ್ಲಿಸಿದಂತಾಗುತ್ತದೆ. ಆದ್ದರಿಂದ ಇವರನ್ನು ಎಂಎಲ್‌ಎ ಮಾಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ನೆರೆದಿದ್ದ ಜನರು ಎರಡು ಕೈಗಳನ್ನು ಮೇಲೆತ್ತುವುದರ ಮೂಲಕ ಬಹುಮತ ಸೂಚಿಸಿದರು.
ಮಾಜಿ ಶಾಸಕರಾದ ಪರಿಮಳಾ ನಾಗಪ್ಪ, ಬಾಲರಾಜು, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾ ಉಪಾಧ್ಯಕ್ಷ ಡಾ.ಎಸ್.ದತ್ತೇಶ್‌ಕುಮಾರ್, ರಾಜ್ಯ ಒಬಿಸಿ ಕಾರ್ಯಕಾರಿಣಿ ಸದಸ್ಯ ಬಿ.ವೆಂಕಟೇಶ್, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಹದೇವಸ್ವಾಮಿ, ಬಿಹಾರ ಎಂಎಲ್ಸಿ ದಿಲೀಪ್‌ಕುಮಾರ್ ಜೆಸ್ವಾಲ್, ತಮಿಳುನಾಡಿನ ಮಾಜಿ ಸಂಸದ ಪೊನ್ನು ರಾಧಾಕೃಷ್ಣನ್, ಮಂಡಲ ಅಧ್ಯಕ್ಷರಾದ ಹನೂರಿನ ಸಿದ್ದಪ್ಪ, ರಾಮಾಪುರದ ವೀರಭದ್ರ, ಮುಖಂಡ ನಿಶಾಂತ್ ಇತರರು ಇದ್ದರು.
18-20 ಸಾವಿರ ಮತಗಳ ಅಂತರದಿಂದ ಗೆಲುವು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಹನೂರಿಗೆ ಅಮಿತ್ ಷಾ ಆಗಮಿಸಿರುವುದರಿಂದ ದತ್ತೇಶ್‌ಕುಮಾರ್, ವೆಂಕಟೇಶ್ ಹಾಗೂ ನಿಶಾಂತ್ ಇವರೆಲ್ಲರ ಸಹಕಾರದಿಂದ ಪ್ರೀತನ್ ನಾಗಪ್ಪ 18-20 ಸಾವಿರ ಮತಗಳ ಅಂತರದಿಂದ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ ಬಾರಿ ಕಡಿಮೆ ಅಂತರದಿಂದ ಗೆಲುವಿಗೆ ಹಿನ್ನಡೆಯಾಯಿತು. ಆದ್ದರಿಂದ ಪ್ರೀತನ್ ನಾಗಪ್ಪ ಗೆಲುವಿಗೆ ತಾವು ಬೆಂಬಲ, ಆಶೀರ್ವಾದ ಮಾಡಬೇಕು ಎಂದರು.
ಅಭ್ಯರ್ಥಿ ಡಾ.ಪ್ರೀತನ್ ನಾಗಪ್ಪ ಮಾತನಾಡಿ, ಕ್ಷೇತ್ರದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇತರ ಮೂಲಸೌಕರ್ಯಗಳ ಕೊರತೆ ಇದ್ದು, ಅಭಿವೃದ್ಧಿ ಕಂಡಿಲ್ಲ. ಕಳೆದ ಬಾರಿ ನಾನು ಕಡಿಮೆ ಮತಗಳ ಅಂತರದಿಂದ ಸೋತಿದ್ದೇನೆ. ಹಾಗಾಗಿ ಈ ಬಾರಿಯೂ ನನಗೆ ಪಕ್ಷ ಟಿಕೆಟ್ ನೀಡಿದೆ. ದಿ.ನಾಗಪ್ಪ ಅವರು ಸುಮಾರು 50 ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದಾರೆ. ಈ ದಿಸೆಯಲ್ಲಿ ನಾಗಪ್ಪ ಹೇಗೆ ದುಡಿದರೋ ಅದೇ ರೀತಿಯಲ್ಲಿ ಕ್ಷೇತ್ರದ ಅಭಿವೃದ್ದಿಗೆ ದುಡಿಯುತ್ತೇನೆ. ಆದ್ದರಿಂದ ಸೇವೆ ಮಾಡಲು ಅವಕಾಶ ನಿಡುವಂತೆ ಮನವಿ ಮಾಡಿದರು.
ಬಿಸಿಲನ್ನೂ ಲೆಕ್ಕಿಸದೆ ಕಾದು ನಿಂತ ಜನರು: ಅಮಿತ್ ಷಾ ಹಾಗೂ ಯಡಿಯೂರಪ್ಪ ಅವರ ಆಗಮನದ ಹಿನ್ನ್ನೆಲೆಯಲ್ಲಿ ಕ್ಷೇತ್ರದ ವಿವಿಧೆಡೆಯಿಂದ ಸಾವಿರಾರು ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಿಗದಿಯಂತೆ 12.40ಕ್ಕೆ ಆಗಮಿಸಬೇಕಿತ್ತು. ಆದರೆ ಅವರು 2 ಗಂಟೆಗೆ ವೇದಿಕೆಗೆ ಆಗಮಿಸಿದರು. ಆದರೂ ಕುರ್ಚಿ ಸಿಗದೆ ಕಾರ್ಯಕ್ರಮ ಮುಗಿಯುವವರೆಗೂ ಜನರು ಬಿಸಿಲನ್ನು ಲೆಕ್ಕಿಸದೆ ನಿಂತು ಅಮಿತ್ ಷಾ ಹಾಗೂ ಯಡಿಯೂರಪ್ಪ ಅವರ ಭಾಷಣ ಆಲಿಸಿದರು. ಇದಕ್ಕೂ ಮುನ್ನ ಬಿಜೆಪಿಯ ಸ್ಫೂರ್ತಿದಾಯಕ ಹಾಡಿಗೆ ನೆರೆದಿದ್ದ ಜನರು ಕುಣಿದು ಸಂಭ್ರಮಿಸಿದರು.