ಜಿಲ್ಲೆ

ಪ್ರೀತಂಗೌಡ ಭ್ರಮೆಯಿಂದ ಹೊರಬರಲಿ: ಬನವಾಸೆ ರಂಗಸ್ವಾಮಿ

ಹಾಸನ : ಶಾಸಕ ಪ್ರೀತಂ ಜೆ.ಗೌಡ ಅವರು ಹಣದಿಂದ ಎಲ್ಲವನ್ನೂ ಪಡೆಯಬಹುದು ಎಂಬ ಭ್ರಮೆಯಲ್ಲಿದ್ದು, ಈ ಬಾರಿ ಹಾಸನ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ಹೇಳಿದರು.

ಕಳೆದ ಚುನಾವಣೆಯಲ್ಲಿ ಆಕಸ್ಮಿಕ ಜಯ ಸಾಧಿಸಿದ ಅವರು ಬಲ ಪ್ರದರ್ಶನ ಮಾಡುವ ಭರದಲ್ಲಿ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರನ್ನು ಹಣ ಕೊಟ್ಟು ಕರೆದುಕೊಂಡು ಬಂದು ರ‌್ಯಾಲಿ ಮಾಡುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಲೇವಡಿ ಮಾಡಿದರು.

ಕಳಪೆ ಕಾಮಗಾರಿ, ಅಸಮರ್ಥ ಆಡಳಿತ, ಭ್ರಷ್ಟಾಚಾರ ಮಾಡುತ್ತಲೇ ಐದು ವರ್ಷ ಕಳೆದಿರುವ ಶಾಸಕ ಪ್ರೀತಂಗೌಡರ ಕರೆಗೆ ಈ ಕ್ಷೇತ್ರದ ಜನರು ಬರುವುದಿಲ್ಲ ಎಂಬುದು ಗೊತ್ತಿದ್ದರಿಂದಲೇ ಹೊರಭಾಗಗಳಿಂದ ವಾಹನಗಳಲ್ಲಿ ಜನರನ್ನು ತುಂಬಿಸಿಕೊಂಡು ಮೆರವಣಿಗೆ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮಾಡಿದ ಸಣ್ಣ ತಪ್ಪಿನಿಂದ ಅವರು ಶಾಸಕರಾದರು. ಅದೇ ಕಾರಣಕ್ಕೆ ಲಗಾಮಿಲ್ಲದ ಕುದುರೆಯಂತೆ ಓಡುತ್ತಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.

ಸರಳತೆ, ಒಳ್ಳೆತನಕ್ಕೆ ಹೆಸರಾಗಿರುವ ಹಾಸನ ಜನರು ಸತ್ಯ, ಪ್ರಾಮಾಣಿಕತೆಗೆ ಬೆಂಬಲ ಸೂಚಿಸುತ್ತಾರೆ ಎಂಬ ನಂಬಿಕೆ ಇದ್ದು, ಈ ಬಾರಿ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರವಾದರೂ ಸರಿ, ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿರುವಷ್ಟು ಕಾರ್ಯಕರ್ತರ ಪಡೆ ಬಿಜೆಪಿ ಅಥವಾ ಜೆಡಿಎಸ್‌ನಲ್ಲಿಲ್ಲ. ಸಮೀಕ್ಷೆಗಳು ಏನೇ ಹೇಳಿದರೂ ಜನರು ಯಾವ ಮಾನದಂಡ ಆಧರಿಸಿ ಈ ಬಾರಿ ಮತದಾನ ಮಾಡುತ್ತಾರೆ ಎಂಬುದನ್ನು ಯಾರೂ ಗುರುತಿಸುತ್ತಿಲ್ಲ. ಹಾಸನದ ಎಲ್ಲಾ ಪ್ರಥಮಗಳಿಗೆ ಕಾಂಗ್ರೆಸ್ ಕಾರಣ. ನಮ್ಮ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ರಾಜ್ಯದ ಎಲ್ಲಾ ನಾಯಕರ ಆಶೀರ್ವಾದ, ಜಿಲ್ಲೆಯ ಮುಖಂಡರ ಸಹಕಾರದಿಂದ ಸಂಘಟನಾತ್ಮಕವಾಗಿ ಪ್ರಚಾರ ಕಾರ್ಯ ನಡೆಸಲಾಗುವುದು. ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿ, ಇನ್ನೇರಡು ದಿನಗಳನ್ನು 15 ರಿಂದ 20 ಸಾವಿರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಮಲ್ಲಿಗೆವಾಳು ದ್ಯಾವಪ್ಪ, ಮಹೇಂದ್ರ ವರ್ಗೀಸ್, ರವಿ, ಅಬ್ದುಲ್ ಖಯೀಬ್ ಇದ್ದರು.