ಹಾಸನ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಅತಿಹೆಚ್ಚು ಮತಗಳ ಅಂತರದಿಂದ ಪುನರಾಯ್ಕೆ ಆಗುವ ಭ್ರಮೆಯಲ್ಲಿರುವ ಹಾಸನದ ಶಾಸಕರಿಗೆ ಕ್ಷೇತ್ರದ ಜನರೇ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಪೆಂಡಾಲ್ ಗಣಪತಿಗೆ ಬುಧವಾರ ತಮ್ಮ ತಂದೆ ಎಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ಅವರೊಂದಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಪ್ರೀತಂಗೌಡ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ವ್ಯಗ್ರರಾಗಿ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ ನೇತೃತ್ವವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಹಿಸುವುದಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ರೇವಣ್ಣ ಅವರ ಶಕ್ತಿ ಕುಂದಿದೆಯೇ ಎಂಬುದಾಗಿ ಶಾಸಕ ಪ್ರೀತಂಗೌಡ ಮಾಡಿರುವ ಟೀಕೆ ಕುರಿತು ಪ್ರಸ್ತಾಪಿಸಿದಾಗ, ‘ಯಾವನ್ರಿ ಅವನು, ಅವನ ಹೇಳಿಕೆಯನ್ನು ಬಿಟ್ಟಾಕಿ, ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವನು ಯಾವನು ಅಂತ ನಾನು ಉತ್ತರ ಕೊಡಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಹೈಕಮಾಂಡ್ ಎಚ್.ಡಿ. ಕುಮಾರಸ್ವಾಮಿ ಅವರು ಬಂದು ಪ್ರೀತಂಗೌಡರ ಸವಾಲು ಸ್ವೀಕಾರ ಮಾಡಿದ್ದಾರೆ ಎಂದರೆ ನಾವು ಸಹ ಸವಾಲು ಸ್ವೀಕಾರ ಮಾಡಿದ್ದೇವೆ ಎಂದು ಅರ್ಥ. ನೂರಕ್ಕೆ ನೂರು ಭಾಗ ಅವರನ್ನು ಸೋಲಿಸುವುದು ಶತಸಿದ್ಧ. ಈ ಮಾತು ನಾನು ಹೇಳುತ್ತಿಲ್ಲ. ಹಾಸನ ಕ್ಷೇತ್ರದ ಜನರೇ ಹೇಳುತ್ತಿದ್ದಾರೆ ಎಂದು ನುಡಿದರು
ಹುಟ್ಟು ಹಬ್ಬಕ್ಕೆ ಆಹ್ವಾನ ಇತ್ತು:
ದಿವಂಗತ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನನಗೆ ಎರಡು ದಿನ ಮೊದಲು ಹೇಳಿದರು. ಆದರೆ ಜಪಾನ್ ಡೆಲಿಗೇಶನ್‌ಗೆ ಅದಾಗಲೇ ದಿನಾಂಕ ನಿಗದಿ ಆಗಿದ್ದ ಕಾರಣ ಭಾಗವಹಿಸಲು ಸಾಧ್ಯವಾಗಲಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಟಿಕೆಟ್ ವಿಚಾರದಲ್ಲೂ ಯಾವುದೇ ಗೊಂದಲ ಆಗುವುದಿಲ್ಲ. ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಅವರ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ನಮ್ಮಲ್ಲಿ ಹಲವು ಅಭ್ಯರ್ಥಿಗಳು ಇದ್ದು ಪಕ್ಷದ ಅಧ್ಯ ಕ್ಷರಿಗೆ ಎಲ್ಲರೂ ಮನವಿ ಸಲ್ಲಿಸುವ ಕೆಲಸ ಮಾಡುತ್ತೇವೆ. ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ ಪಕ್ಷದ ಹಿರಿಯರು ಮತ್ತು ಸ್ಥಳೀಯ ಮುಖಂಡರ ಅಭಿಪ್ರಾಯ ಆಲಿಸಿ ಟಿಕೆಟ್ ಘೋಷಣೆ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಎಲ್ಲರೂ ಸಮಾನ್ಯ ಕಾರ್ಯಕರ್ತರೇ:
ಹಾಸನ ಕ್ಷೇತ್ರದಿಂದ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಕುರಿತು ಪ್ರಸ್ತಾಪಿಸಿದಾಗ, ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ. ಸಂಸದನಾಗುವ ಮೊದಲು ನಾನು ಸಹ 13 ವರ್ಷಗಳ ಕಾಲ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಎಲ್ಲರೂ ಅವರವರ ಪರಿಶ್ರಮ ತೋರಿಸಲೇಬೇಕು. ಯಾರು ಬೇಕಾದರೂ ಟಿಕೆಟ್‌ಗೆ ಅರ್ಜಿ ಹಾಕಬಹುದು ಎಂದು ನುಡಿದರು.
ಪೂಜೆಗೆ ಬಂದಿದ್ದೇನೆ, ರಾಜಕೀಯ ಮಾತಾಡಲ್ಲ:
ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರನ್ನು ಸುದ್ದಿಗಾರರು ಮಾತನಾಡಿಸಿದಾಗ, ಜನರ ವಿಘ್ನ ನಿವಾರಿಸಲಿ, ಎಲ್ಲರಿಗೂ ಒಳ್ಳೆಯದು ಮಾಡಲೆಂದು ಕುಟುಂಬ ಸಮೇತ ಗಣಪತಿಗೆ ಪೂಜೆ ಸಲ್ಲಿಸಿದ್ದೇವೆ. ಜಿಲ್ಲೆ ಹಾಗೂ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇವೆ. ರಾಜಕೀಯ ಮಾತನಾಡಲ್ಲ ಎಂದರು.