ಜಿಲ್ಲೆ

ಪ್ರಿಯಾಂಕ್ ಖರ್ಗೆಯನ್ನು ಸಂಪುಟದಿಂದ ಕೈ ಬಿಡಲಿ: ಬಿಜೆಪಿ ಮುಖಂಡ ಭಾಸ್ಕರ್ ರಾವ್ ಆಗ್ರಹ

ಮಂಜುನಾಥ ತಿಮ್ಮಯ್ಯ

ಮೈಸೂರು: ಬೀದರ್‌ನಲ್ಲಿ ನಡೆದ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಬಿಜೆಪಿ ಮುಖಂಡ ಭಾಸ್ಕರ್ ರಾವ್ ಆಗ್ರಹಿಸಿದರು.

ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖವಾಗಿದೆ. ರಿಪಬ್ಲಿಕ್ ಆಫ್ ಕಲಬುರಗಿಯಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ತಡೆಗಟ್ಟಬೇಕಾದರೆ, ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಕಾಂಗ್ರೆಸ್ ರಾಜ್ಯ ನಾಯಕರು ಹೆದರುತ್ತಿದ್ದಾರೆ. ಇದರಿಂದಲೇ ಅವರು ಎಲ್ಲ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಮೂಲೆಗುಂಪು ಮಾಡಲಾಗಿದೆ.

ಇದರಿಂದ ಗೃಹ ಇಲಾಖೆಯಲ್ಲಿ ಏನಾಗುತ್ತಿದೆ ಎಂದು ಅವರಿಗೆ ತಿಳಿಯುತ್ತಿಲ್ಲ. ಆ ಕಾರಣದಿಂದ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ ಎಂದು ದೂರಿದರು.

ರಾಜ್ಯ ಸರ್ಕಾರಕ್ಕೆ ಬಹುಮತ ಸಿಕ್ಕಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಅದನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಜನರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ವಿರೋಧ ಪಕ್ಷಗಳ ಹೋರಾಟವನ್ನು ಉಡಾಫೆಯಿಂದ ನೋಡುತ್ತಿದೆ ಎಂದು ಹರಿಹಾಯ್ದರು.

ರಾಜ್ಯದಲ್ಲಿ ದುರಂಹಕಾರದ ಆಡಳಿತ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಬ್ಬ ದುರಂಹಕಾರಿ. ಮುಡಾ ಪ್ರಕರಣದಲ್ಲಿ ನಿವೇಶನ ವಾಪಸ್ ಕೊಟ್ಟಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡಂತಾಗಿದೆ ಎಂದು ಟೀಕಿಸಿದರು.

ಸರ್ಕಾರಿ ಅಧಿಕಾರಿಗಳ ಆತ್ಮಹತ್ಯೆ ಪ್ರಕರಣಗಳ ತನಿಖೆಯನ್ನು ಸಿಐಡಿ ಸಮರ್ಪಕವಾಗಿ ಮಾಡುತ್ತಿಲ್ಲ. ಬೀಸುವ ದೊಣ್ಣೆಯಿಂದ ಪಾರಾಗಲು ಸರ್ಕಾರ ಸಿಐಡಿಯನ್ನು ಬಳಸಿಕೊಳ್ಳುತ್ತಿದೆ. ಕೆಲವು ಪ್ರಕರಣಗಳ ಬಗ್ಗೆ ಆರೋಪಪಟ್ಟಿ ಸಲ್ಲಿಸುವುದಕ್ಕೂ ಮುಂದಾಗಿಲ್ಲ. ಪ್ರಕರಣದ ತನಿಖಾ ಪ್ರಗತಿಯನ್ನು ದೂರುದಾರರ ಕುಟುಂಬದವರಿಗೂ ನೀಡುತ್ತಿಲ್ಲ ಎಂದು ಹರಿಹಾಯ್ದರು.

ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್.ಮಹಾದೇವ ಸ್ವಾಮಿ, ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಇನ್ನಿತರರಿದ್ದರು.