ಜಿಲ್ಲೆ

ಪ್ರಿಯಕರನ ಜತೆ ಸೇರಿ ಪತಿಯನ್ನೇ ಕೊಲೆಗೈದ ಪತ್ನಿ

Haveri

ಶಿಗ್ಗಾಂವಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯೇ ಪ್ರಿಯಕರನ ಜತೆ ಸೇರಿ ಪತಿಯನ್ನು ಹತ್ಯೆಗೈದ ಘಟನೆ ತಾಲೂಕಿನ ರಾಮನಕೊಪ್ಪ ಕ್ರಾಸ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಗುಡ್ಡದಹುಲಿಕಟ್ಟಿ ಗ್ರಾಮದ ಶಿವಾನಂದ ಯಲ್ಲಪ್ಪ ಹುಬ್ಬಳ್ಳಿ (50) ಕೊಲೆಯಾದವರು. ಈತನ ಪತ್ನಿ ಅನ್ನಪೂರ್ಣ ಶಿವಾನಂದ ಹುಬ್ಬಳ್ಳಿ (37) ಹಾಗೂ ಈಕೆಯ ಪ್ರಿಯಕರ ಕಲಘಟಗಿ ತಾಲೂಕಿನ ಪರಸಾಪುರ ಗ್ರಾಮದ ಯಲ್ಲಪ್ಪ ಶಾಂತಪ್ಪ ಚೋಳಪ್ಪನವರ (57) ಕೊಲೆಗೈದ ಆರೋಪಿಗಳು.

ಈ ಕುರಿತು ತಡಸ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಘಟನೆ ಹಿನ್ನೆಲೆ: ಶಿವಾನಂದನಿಗೆ 9 ಎಕರೆ ಜಮೀನಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಈತ ನಿತ್ಯವೂ ಮದ್ಯ ಸೇವನೆ ಮಾಡುತ್ತಿದ್ದ. ಇದರಿಂದ ಬೇಸತ್ತ ಪತ್ನಿ ಅನ್ನಪೂರ್ಣ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದಳು. ಪ್ರಸಕ್ತ ವರ್ಷ ಮುಂಗಾರು ಆರಂಭದಲ್ಲಿ ಯಲ್ಲಪ್ಪ ಚೋಳಪ್ಪನವರ, ಶಿವಾನಂದನ 4 ಎಕರೆ ಜಮೀನಿನನ್ನು ಲಾವಣಿ ಹಾಕಿಕೊಂಡಿದ್ದನು.

ಯಲ್ಲಪ್ಪ ಜಮೀನು ಲಾವಣಿ ಹಾಕಿಕೊಂಡ ಬಳಿಕ ಅನ್ನಪೂರ್ಣ ಪತಿಯ ಮನೆಗೆ ವಾಪಸಾಗಿದ್ದಳು. ಯಲ್ಲಪ್ಪ ಹಾಗೂ ಅನ್ನಪೂರ್ಣ ಕೃಷಿ ಕೆಲಸಕ್ಕೆ ಹೋದಾಗ ಪರಿಚಯವಾಗಿ ಅನೈತಿಕ ಸಂಬಂಧ ಬೆಳೆದಿದೆ. ಈ ವಿಚಾರ ಶಿವಾನಂದನಿಗೆ ತಿಳಿದಿದೆ. ಇದರಿಂದಾಗಿ ಅನ್ನಪೂರ್ಣಾಳ ಸಹಕಾರದಿಂದ ಶಿವಾನಂದನನ್ನು ಕೊಲೆ ಮಾಡಲು ಸಂಚು ಹಾಕಿದ ಯಲ್ಲಪ್ಪ, ಸೆ. 29ರಂದು ಶಿವಾನಂದನನ್ನು ಬೈಕ್ ಮೇಲೆ ಕರೆದುಕೊಂಡು ಹೋಗಿ ಮದ್ಯ ಕುಡಿಸಿ ರಾಮನಕೊಪ್ಪ ಕ್ರಾಸ್ ಬಳಿ ಜಮೀನೊಂದರಲ್ಲಿ ತಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಘಟನೆ ನಡೆದು 15 ದಿನವಾದರೂ ಮೃತನ ಪತ್ನಿ ದೂರು ನೀಡಲು ಮುಂದಾಗದಿದ್ದಾಗ, ಪೊಲೀಸರು ಅನ್ನಪೂರ್ಣಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಸತ್ಯಾಂಶ ಬಾಯ್ಬಿಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತ್ನಿ ಕೊಲೆಗೈದು ಜೈಲಿಗೆ ಹೋಗಿ ಬಂದಿದ್ದ ಪ್ರಿಯಕರ: ಅನ್ನಪೂರ್ಣಾಳ ಪ್ರಿಯಕರ ಯಲ್ಲಪ್ಪ ಕಳೆದ 15 ವರ್ಷದ ವರ್ಷದ ಹಿಂದೆ ತನ್ನ ಪತ್ನಿಯನ್ನೇ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದನು. ಇದೀಗ ಅನ್ನಪೂರ್ಣಾಳ ಸಂಗ ಬೆಳೆಸಿ ಮತ್ತೊಂದು ಕೊಲೆ ಮಾಡಿ ಮತ್ತೆ ಜೈಲು ಸೇರಿದ್ದಾನೆ.