ಜಿಲ್ಲೆ

ಪ್ರಾಸಿಕ್ಯೂಷನ್ ಅನುಮತಿ ಕೋರಿ ಮನವಿ

ಬೆಳಗಾವಿ: ಸಹಕಾರ ಸಚಿವ ಕೆ.ಎನ್.ರಾಜಣ್ಣ ಸದನದಲ್ಲಿಯೇ ಹನಿಟ್ರ್ಯಾಪ್ ಹೇಳಿಕೆಯ ಕುರಿತು ಅವರ ಮೇಲೆ ದೂರು ನೀಡಿದರೂ ಇಲ್ಲಿಯವರೆಗೆ ಪೊಲೀಸರು ಪ್ರಕರಣ ದಾಖಲಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ (ಪ್ರಾಸಿಕ್ಯೂಷನ್) ದಾಖಲಿಸಲು ರಾಜ್ಯಪಾಲರಿಗೆ ಅನುಮತಿ ಕೋರಿದ್ದೇನೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲ್ಪಡುವ ಸದನದಲ್ಲಿಯೇ ಹನಿ ಟ್ರ್ಯಾಪ್ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಗೋಪ್ಯತಾ ಪಾಲನಾ ಪ್ರಮಾಣ ವಚನ ಮಾಡಿದಂತೆ ನಡೆದುಕೊಳ್ಳದಿರುವುದು ಸಂವಿಧಾನದಕ್ಕೆ

ಅಪಚಾರವಾದಂತೆ ಮತ್ತು ಇಂಥ ಅಶ್ಲೀಲ ಹೇಳಿಕೆಯಿಂದ ಸಂವಿಧಾನದ ಘನತೆಗೆ ಚ್ಯುತಿ ಬಂದಿದೆ ಎಂದು ಬೆಂಗಳೂರಿನ ಜೆ.ಸಿ.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದರು.

ರಾಜ್ಯದ ಬಹು ಸಂಖ್ಯಾತ ಜನರ ಅಭಿಪ್ರಾಯದಂತೆ ಸಚಿವ ರಾಜಣ್ಣ ಇವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವುದರ ಮೂಲಕ ಕಾನೂನಿನ ಘನತೆ-ಗೌರವಗಳನ್ನು ಹೆಚ್ಚಿಸುವಂತೆ ಸಂವಿಧಾನದ ಪಾಲಕರಾಗಿರುವ ರಾಜ್ಯಪಾಲರಲ್ಲಿ ವಿನಂತಿಸಲಾಗಿದೆ ಎಂದು ತಿಳಿಸಿದರು.