ಬಾಗಲಕೋಟೆ: ಪ್ರತಿಯೊಂದು ಸರಕಾರಿ ಪ್ರಾಯೋಜಿಕ ಯೋಜನೆಗಳಿಗೆ ವಿಳಂಬವಿಲ್ಲದೇ ಆದ್ಯತೆ ಮೇರೆ ಸಾಲ ಮಂಜೂರಾತಿ ನೀಡುವ ಕಾರ್ಯವಾಗಬೇಕೆಂದು ಸಂಸದ ಪಿ.ಸಿ.ಗದ್ದಿಗೌಡರ ಬ್ಯಾಂಕರ್ಸ್‍ಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಇತ್ತೀಚೆಗೆ ಜರುಗಿದ ಅಗ್ರಣಿ ಬ್ಯಾಂಕ್‍ನ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಿಎಂಎಫ್‍ಎಂಇ, ಪಿಎಂಇಜಿಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮತ್ತು ನೇಕಾರ ಮುದ್ರಾ ಸಾಲಗಳಂತಹ ಎಲ್ಲಾ ಸರ್ಕಾರಿ ಪ್ರಾಯೋಜಿತ ಯೋಜನೆಗಳನ್ನು ಪರಿಶೀಲಿಸಿ ಬಾಕಿ ಇರುವ ಸಾಲಗಳನ್ನು ತಕ್ಷಣವೇ ನೀಡುವಂತೆ ಸೂಚಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಜಿಲ್ಲೆಯಲ್ಲಿ ಉನ್ನತಿ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆಯ ಆಧಾರದ ಮೇಲೆ ಅಗತ್ಯವಿರುವ ಬಡ ಕುಟುಂಬಗಳಿಗೆ ಸಾಲಗಳಿಗೆ ಮಂಜೂರಾತಿ ನೀಡಬೇಕು. ಸಾಲ ವಿತರಣೆಗೆ ವಿಳಂಬ ಮಾಡುತ್ತಾ ಹೋದರೆ ಯೋಜನೆಗಳನ್ನು ಸಮಪರ್ಕವಾಗಿ ಅನುಷ್ಠಾನಗೊಳ್ಳುವದಿಲ್ಲ. ಆದ್ದರಿಂದ ವಿವಿಧ ಇಲಾಖೆಗಳಿಂದ ಫಲಾನುಭವಿಗಳ ಆಯ್ಕೆ ಪಟ್ಟಿ ಕಳುಹಿಸದ ತಕ್ಷಣ ಆದ್ಯತೆ ಮೇರೆಗೆ ಸಾಲ ಮಂಜೂರಾತಿ ನೀಡಬೇಕೆಂದು ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಗರಿಷ್ಟ ಪಿ.ಎಂ.ಜೆ.ಜೆ.ಬಿ.ವೈ ಮತ್ತು ಪಿ.ಎಂ.ಎಸ್.ಬಿ.ವೈ ಯೋಜನೆಯಡಿ ನೋಂದಾಯಿಸಲು ಬ್ಯಾಂಕರ್ಸ್‍ಗಳಿಗೆ ಸೂಚಿಸಿದರು. ಸಿಡಿ ಅನುಪಾತ ಮತ್ತು ವಾರ್ಷಿಕ ಕ್ರೆಡಿಟ್ ಯೋಜನೆಯ ಗುರಿ ಮತ್ತು ಜಿಲ್ಲೆಯ ಸಾಧನೆಯನ್ನು ಪರಿಶೀಲನೆ ಮಾಡಿದರಲ್ಲದೇ 2025-26ಕ್ಕೆ ಪಿ.ಎಲ್‍ಪಿ ಸಂಭಾವ್ಯ ಲಿಂಕ್ಡ್ ಯೋಜನೆಯನ್ನು ಪ್ರಾರಂಭಿಸಿರುವುದಾಗಿ ತಿಳಿಸಿದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿಲ್ಲಾ ಅಗ್ರಣಿ ಬ್ಯಾಂಕಿನ ವ್ಯವಸ್ಥಾಪಕ ರಾಜಕುಮಾರ ಹೂಗಾರ, ನಬಾರ್ಡಬ ಮಂಜುನಾಥ ರೆಡ್ಡಿ, ಕೆನರಾ ಬ್ಯಾಂಕ್‍ನ ಜನರಲ್ ಮ್ಯಾನೇಜರ್ ಕೆ.ಎಂ.ಶೈಲಜಾ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.