ಜಿಲ್ಲೆ

ಪ್ರಾಮಾಣಿಕವಾಗಿ ಕರ್ತವ್ಯ ನಿಭಾಯಿಸಿ

ಶಿಕ್ಷಕರಿಗೆ ಪ್ರಾಥಮಿಕ ಶಿಕ್ಷಣ -ಸಚಿವ ಮಧುಬಂಗಾರಪ್ಪ ಸೂಚನೆ, ಸಭೆಗೆ ಒಂದೂವರೆ ಗಂಟೆ ತಡವಾಗಿ ಬಂದ ಮಂತ್ರಿ!

ತುಮಕೂರು: ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗಲು ಬೆಳಗ್ಗೆ 10.30ಕ್ಕೆ ಬಂದ್ದಿದ್ದ ಇಲಾಖೆ ಅಧಿಕಾರಿಗಳು ಸಚಿವರಿಗಾಗಿ ಕಾದುಕಾದು ಸೋತು ಹೋದ ಪ್ರಸಂಗ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು!.

ಶನಿವಾರ ಬೆಳಗ್ಗೆ 11ಕ್ಕೆ ನಿಗದಿಯಾಗಿದ್ದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಸಚಿವ ಮಧುಬಂಗಾರಪ್ಪ ಬರುವ ಹೊತ್ತಿಗೆ ಮಧ್ಯಾಹ್ನ 12.30 ದಾಟಿತ್ತು. ಒಂದೂವರೆ ಗಂಟೆ ತಡವಾಗಿ ಸಭೆಗೆ ಆಗಮಿಸಿದ ಶಿಕ್ಷಣ ಸಚಿವರು ತಡವಾಗಿ ಬಂದಿದ್ದಕ್ಕೂ "ಕ್ಷಮೆಯಾಚಿಸುವ' ಸೌಜನ್ಯವನ್ನು ತೋರಲಿಲ್ಲ.

ಪರೀಾ ಪಾವಿತ್ರ$್ಯತೆ ಪಾಠ!: ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ನಕಲು ಮಾಡಲು ಅವಕಾಶ ನೀಡದೆ ಪರೀಾ ಪಾವಿತ್ರ$್ಯತೆ ಕಾಪಾಡಿಕೊಳ್ಳಲಾಗಿದೆ. ವೆಬ್​ ಕ್ಯಾಸ್ಟಿಂಗ್​ ಅಳವಡಿಸಿದ್ದರಿಂದ ಲಿತಾಂಶ ಕುಸಿದಿರಬಹುದು. ಆದರೆ, ಮಕ್ಕಳಲ್ಲಿನ ಕಲಿಕಾ ಸಾಮರ್ಥ್ಯ ಹೆಚ್ಚಿದೆ. ಹಾಗಾಗಿ, ಗುಣಮಟ್ಟ ಶಿಕ್ಷಣ ನೀಡುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿಕೊಳ್ಳಲು ಶಾಲೆಗಳು ಪರೀಕ್ಷಾ ನಕಲಿಗೆ ಅವಕಾಶ ಮಾಡಿಕೊಡಬಾರದು. ಇದರಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವೆಬ್​ಕಾಸ್ಟಿಂಗ್​ ಪದ್ಧತಿಯಿಂದ ಮಕ್ಕಳಲ್ಲಿಯೂ ಕಲಿಕಾ ಸಾಮರ್ಥ್ಯ ಹೆಚ್ಚಾಗಿದೆಯಲ್ಲದೆ, ಪಾಲಕರಿಗೂ ಸರ್ಕಾರಿ ಶಾಲೆಗಳ ಮೇಲೆ ವಿಶ್ವಾಸ ಮೂಡಿದೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪಾಲಕರು ಹಾಗೂ ಶಿಕ್ಷಕರು ಯಾವುದೇ ರೀತಿಯಲ್ಲಿ ಮಾನಸಿಕವಾಗಿ ಕುಗ್ಗಿಸುವಂತಿಲ್ಲ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ಶಿಕ್ಷಕರು ಹೆಚ್ಚಿನ ಗಮನ ನೀಡಬೇಕೇ ಹೊರತು ಶಿಕ್ಷಕರು ರಾಜಕಾರಣ, ಹಣಕಾಸು ವ್ಯವಹಾರ, ರಿಯೆಲ್​ ಎಸ್ಟೇಟ್​ನಲ್ಲಿ ತೊಡಗಿಕೊಳ್ಳದೆ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿಭಾಯಿಸುವಂತೆ ಸಚಿವರು ಪಾಠ ಮಾಡಿದರು.

ಜಿಲ್ಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕುಸಿದಿದ್ದು, ಫಲಿತಾಂಶ ಸುಧಾರಿಸಲು ಶಿಕ್ಷಕರು, ಅಧಿಕಾರಿಗಳು ಶ್ರಮಿಸಬೇಕು. ಜ್ಞಾನ ಸಂವರ್ಧನೆ ಹಾಗೂ ಶಿಕ್ಷಕರ ಕಾರ್ಯಕ್ಷಮತೆ ಹೆಚ್ಚಿಸುವ, ಅನುಭವಾತ್ಮಕ ಕಲಿಕೆಗಾಗಿ ರೂಪಿಸಿರುವ ವಿನೂತನ ಕಾರ್ಯಕ್ರಮಗಳ ಮೂಲಕ ಜಿಲ್ಲೆಯು ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ. ಈ ಕಾರ್ಯಕ್ರಮ ಇತರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.ಗ್ರಾಮಾಂತರ ಶಾಸಕ ಬಿ.ಸುರೇಶ್​ ಗೌಡ, ಜಿಪಂ ಸಿಇಒ ಜಿ.ಪ್ರಭು, ತುಮಕೂರು, ಮಧುಗಿರಿ ಡಿಡಿಪಿಐಗಳಾದ ಮನಮೋಹನ ಹಾಗೂ ಗಿರಿಜಾ, ಡಯಟ್​ ಪ್ರಾಂಶುಪಾಲ ಮಂಜುನಾಥ, ಡಿಡಿಪಿಯು ಬಾಲಗುರುಮೂರ್ತಿ ಸೇರಿದಂತೆ ಮತ್ತಿತರರು ಇದ್ದರು.

479 ಶಾಲಾ ಕೊಠಡಿಗಳ ಅವಶ್ಯ: ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ವಸತಿ ಶಾಲೆ ಸೇರಿದಂತೆ ಒಟ್ಟು 3873 ಶಾಲೆಗಳಿದ್ದು, 2,10,183 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 435 ಶಾಲೆಗಳಿಗೆ ಕಾಂಪೌಂಡ್​, 550 ಶೌಚಗೃಹ, 247 ಶಾಲಾ ಆಟದ ಮೈದಾನ ನಿರ್ಮಿಸಲಾಗಿದ್ದು, 1347 ನಿಮಾರ್ಣ ಕಾಮಗಾರಿಗಳು ಪ್ರಗತಿಯಲ್ಲಿವೆ. ಶಿಥಿಲಗೊಂಡಿದ್ದ 800 ಕೊಠಡಿಗಳನ್ನು ನೆಲಸಮಗೊಳಿಸಿದ್ದು ಈ ಸಾಲಿನಲ್ಲಿ 479 ಹೊಸ ಶಾಲಾ ಕೊಠಡಿಗಳನ್ನು ನಿರ್ಮಿಸಲು ಸರ್ಕಾರದಿಂದ 71 ಕೋಟಿ ರೂಪಾಯಿಗಳ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಪಂ ಸಿಇಒ ಜಿ.ಪ್ರಭು ಸಚಿವರ ಗಮನಕ್ಕೆ ತಂದರು.

15 ಸಾವಿರ ಶಿಕ್ಷಕರ ನೇಮಕ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಶಿಕ್ಷಣ ಇಲಾಖೆಯಲ್ಲಿ ಖಾಲಿಯಿದ್ದ 13,500 ಶಾಲಾ ಶಿಕ್ಷಕರ ನೇಮಕಾತಿ ಮಾಡಲಾಗಿದೆಯಲ್ಲದೆ. ಹೊಸದಾಗಿ 15000 ಶಾಲಾ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಎಸ್​.ಮಧುಬಂಗಾರಪ್ಪ ಹೇಳಿದರು. ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ಶಾಲೆಯಲ್ಲೇ ಬೆಸ್ಟ್​ ಟೀಚರ್ಸ್​ ಇರುವುದು. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಕೊರತೆ ನೀಗಿಸಲು ಹೊಸದಾಗಿ ಶಿಕ್ಷಕರ ನೇಮಕಾತಿಗೆ ಸರ್ಕಾರ ಮುಂದಾಗಿದೆ. ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗಿದ್ದು, ಸದ್ಯ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಭರವಸೆಯಿತ್ತರು. ರಾಜ್ಯದಲ್ಲಿ ಇಂಗ್ಲಿಷ್​ ಮಾಧ್ಯಮದ ಶಾಲೆಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ದ್ವಿಭಾಷಾ ಶಾಲೆಗಳನ್ನು ತೆರೆಯಲಾಗುವುದು. ಈಗಿರುವ ಕನ್ನಡ ಮಾಧ್ಯಮದ ಶಾಲೆಗಳು ದ್ವಿಭಾಷಾ ಶಾಲೆಗಳನ್ನಾಗಿ ಮಾರ್ಪಡಿಸಲಾಗುವುದು. ಈಗಿರುವ ಶಾಲೆಗಳನ್ನು ಕೆಪಿಎನ್​ ಶಾಲೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಇದರಿಂದ ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಆಸಕ್ತಿ ತೋರುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಪದವಿ ಪೂರ್ವ ಕಾಲೇಜುಗಳನ್ನೂ ಸಹ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಪದವಿ ಪೂರ್ವ ಕಾಲೇಜುಗಳಿಗೂ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕ್ರಮವಹಿಸಲಾಗುವುದು ಎಂದರು.

ಸಭೆಯಲ್ಲಿ ನಿದ್ದೆಗೆ ಜಾರಿದ ಅಧಿಕಾರಿಗಳು: ಶಿಕ್ಷಣ ಸಚಿವರ ನೇತೃತ್ವದ ನಡೆದ ಸಭೆಯಲ್ಲಿ ಅಧಿಕಾರಿಗಳು ನಿದ್ದೆಗೆ ಜಾರಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಕುಂದು&ಕೊರತೆಗಳ ಬಗ್ಗೆ ಚರ್ಚೆ ನಡೆಸದೆ ಸಭೆ ಶುರುವಾಗುತ್ತಿದ್ದಂತೆ ಅಧಿಕಾರಿಗಳು ಕುಂತಲ್ಲೆ ನಿದ್ದೆಗೆ ಜಾರಿರುವ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್​ ಆಗಿದೆ. ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕಾದ ಅಧಿಕಾರಿಗಳು ಇಂತಹ ವೇದಿಕೆಗಳನ್ನು ನಿದ್ದೆ ಮಾಡಲು ಬಳಸಿಕೊಂಡಿದ್ದು, ಇಂತವರಿಂದ ಮಕ್ಕಳ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿದ್ದೆಗೆ ಜಾರಿದವರಲ್ಲಿ ಮಧುಗಿರಿ ಶೈಣಿಕ ಜಿಲ್ಲೆಯ ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯರೂ ಇರುವುದು ಚರ್ಚೆಗೆ ಗ್ರಾಸವಾಗಿದೆ.

ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ತಾವು ಓದಿದ ಶಾಲೆಗಳ ಅಭಿವೃದ್ಧಿಗೆ ಹಲವಾರು ದಾನಿಗಳು ಆರ್ಥಿಕ ನೆರವು ನೀಡಲು ಮುಂದೆ ಬರುತ್ತಿರುವುದು ಪ್ರಶಂನಾರ್ಹ. ಶಾಲಾ ಪೀಠೋಪಕರಣ, ಲೇಖನ ಸಾಮಗ್ರಿ, ಸ್ಮಾರ್ಟ್​ ತರಗತಿ ನಿಮಾರ್ಣಕ್ಕೆ ನೆರವು ನೀಡುತ್ತಿದ್ದಾರೆ. ಅಲ್ಲದೆ ಈ ಕಾರ್ಯಕ್ರಮಕ್ಕೆ ಸಿಎಸ್​ಆರ್​ ನಿಧಿಯಿಂದ 1591 ಕೋಟಿ ರೂಪಾಯಿಗಳನ್ನು ಸದ್ವಿನಿಯೋಗಿಸಲಾಗುತ್ತಿದೆ. ಜನಪ್ರತಿನಿಧಿಗಳು, ಅಧಿಕಾರಿಗಳೂ ಓದಿದ ಶಾಲೆಗಳ ಅಭಿವೃದ್ಧಿಗಾಗಿ ಕೊಡುಗೆ ನೀಡಲು ಸಂಕಲ್ಪ ಮಾಡಬೇಕು.| ಎಸ್​.ಮಧುಬಂಗಾರಪ್ಪ ಶಿಕ್ಷಣ ಸಚಿವ