ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿ ಜೀವನವು ಯಶಸ್ಸಿನತ್ತ ಸಾಗಬೇಕಾದರೆ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೂಡಿರುವ ಪ್ರಯತ್ನ ಅಗತ್ಯ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ. ಪಿ. ಸುರೇಶ ಹೇಳಿದರು.
ನಗರದ ಕ್ಲಾಸಿಕ್ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆಯ ಕ್ಲಾಸಿಕ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ 2023-24ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ, ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆ ವಲಯ ಆಯುಕ್ತ ಫಕ್ಕೀರಪ್ಪ ಇಂಗಳಗಿ ಮಾತನಾಡಿ, ಶಿಸ್ತು ಮತ್ತು ಸಂಯಮ ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡುತ್ತವೆ. ಅಧ್ಯಯನವನ್ನು ತಪಸ್ಸು ಎಂದು ತಿಳಿಯಬೇಕು. ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡಬೇಕು ಎಂದರು.
ತೇಜಸ್ವಿನಿ ನಾರಾಯಣಕರ, ಯರ‌್ರಿಸ್ವಾಮಿ ಹಾಗೂ ಗುರುರಾಜ ಸಿಡಗಂಟಿಮಠ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಉಪ್ಪಾರ ಮಾತನಾಡಿ, ವಿದ್ಯಾರ್ಥಿಗಳು ಸದಾ ಗುರಿಯತ್ತ ಗಮನ ಹರಿಸಬೇಕು. ಕೀಳರಿಮೆ ಮತ್ತು ಹೋಲಿಕೆ ಬಿಟ್ಟು ಮುಂದೆ ಸಾಗಬೇಕು ಎಂದರು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರತಿಭಾ ಹಿರೇಮಠ ಸ್ವಾಗತಿಸಿದರು, ಶಕುಂತಲಾ ಮತ್ತು ನಿರಂಜನ ನಿರೂಪಿಸಿದರು. ಆಶಾ ಚೌಗಲಾ ವಂದಿಸಿದರು.