ಬೆಳಗಾವಿ: ಸಾಧಿಸುವ ಇಚ್ಛಾಶಕ್ತಿ, ಪರಿಶ್ರಮ, ಶ್ರದ್ಧೆ, ಪ್ರಾಮಾಣಿಕತೆ, ನಿಸ್ವಾರ್ಥತೆಯು ಅದ್ಭುತ ವ್ಯಕ್ತಿತ್ವ ರೂಪಿಸುತ್ತವೆ. ಯುವ ಜನತೆ ಆಧುನೀಕತೆಯ ಜತೆಗೆ ಸಾಮಾಜಿಕ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ರಾಜ್ಯಉನ್ನತ ಶಿಕ್ಷಣ ಪರಿಷತ್ ವಿಶೇಷ ಅಧಿಕಾರಿ ಡಾ.ಎಂ.ಜಯಪ್ಪ ಅಭಿಪ್ರಾಯಪಟ್ಟರು.
ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ಸಪ್ತಾಹ ದಿನಾಚರಣೆ ಸಮಾರಂಭ ಮತ್ತು ಸುಭಾಷಚಂದ್ರ ಬೋಸ್ ಅವರ ಜಯಂತಿ ಆಚರಣೆಯಲ್ಲಿ ಮಾತನಾಡಿದರು. ಸ್ವಾಮಿ ವಿವೇಕಾನಂದರು ಭಾರತವನ್ನು ಬೌದ್ಧಿಕ ಮತ್ತು ಭೌತಿಕವಾಗಿ ಸದೃಢಗೊಳಿಸಲು ತಮ್ಮ ಜೀವನ ಅರ್ಪಿಸಿಕೊಂಡರು. ಸುಭಾಷ ಚಂದ್ರ ಬೋಸ್ ಕೂಡ ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ಪ್ರಭಾವಿತರಾಗಿ ಜೀವನವನ್ನು ಸ್ವಾತಂತ್ರ್ಯ ಸಮರಕ್ಕೆ ಸಮರ್ಪಿಸಿದರು. ವ್ಯಕ್ತಿಯ ವ್ಯಕ್ತಿತ್ವವು ‘ತಪಸ್ಸಿ’ನಿಂದ ಕೂಡಿದಾಗ ಒಂದು ಅದ್ಭುತ ವ್ಯಕ್ತಿತ್ವ ಪಡೆಯಬಹುದು ಎಂಬುದಕ್ಕೆ ವಿವೇಕಾನಂದ ಮತ್ತು ಸುಭಾಷಚಂದ್ರ ಬೋಸ್ ಮಾದರಿಯಾಗಿದ್ದಾರೆ ಎಂದರು.
ಉದ್ಯಮಿ ಡಾ.ಶ್ರೀಧರ ಜೋಶಿ, ರುದ್ರೇಶ ಹುದಲಿ, ರೇಷ್ಮಾ ದೇಸಾಯಿ ಸ್ವಾಮಿ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ.ಸುಮನ್ ಮುದ್ದಾಪುರ ಪ್ರಾಸ್ತಾವಿಕ ಮಾತನಾಡಿದರು. ಡಾ.ಮಲ್ಲೇಶ ದೊಡ್ಡಲಕ್ಕಣ್ಣವರ ನಿರೂಪಿಸಿದರು. ಉಪನ್ಯಾಸಕ ರುದ್ರಪ್ಪ ಅರಳಿಮಟ್ಟಿ ವಂದಿಸಿದರು.