ಬಾಳೆಹೊನ್ನೂರಿನ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಅವರನ್ನು ಸನ್ಮಾನಿಸಲಾಯಿತು. ಎಂ.ಜೆ.ಮೋಹನ್, ಸತೀಶ್ ಅರಳಿಕೊಪ್ಪ, ಜಯಾ, ಶೇಖರ್, ಪಾರ್ವತಮ್ಮ ಇತರರಿದ್ದರು. 
ಜಿಲ್ಲೆ

ಪ್ರಾಮಾಣಿಕ, ಶ್ರಮಜೀವಿ ಬಿಲ್ಲವರು

ಬಾಳೆಹೊನ್ನೂರು: ಬಿಲ್ಲವ ಸಮುದಾಯದವರು ಎಲ್ಲಿಗೆ ಹೋದರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತ ಶ್ರಮಜೀವಿಗಳಾಗಿ ಹೆಸರು ಪಡೆದಿದ್ದಾರೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಸಿ.ಎ.ದೇವ್ ಆನಂದ್ ಹೇಳಿದರು.

ಪಟ್ಟಣದ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಬುಧವಾರ ಭೇಟಿ ನೀಡಿ ಸಂಘದಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು,

ವಿದೇಶಗಳಲ್ಲಿಯೂ ಬಿಲ್ಲವರು ಪ್ರಸಿದ್ಧಿ ಪಡೆದಿದ್ದಾರೆ. ಎಲ್ಲರೂ ಬಿಲ್ಲವ ಸಮುದಾಯವನ್ನು ನಂಬಿಕೆಯಿಂದ ನೋಡಬಹುದು. ಪ್ರಾಮಾಣಿಕ ಸೇವೆಯನ್ನು ಸಮಾಜಕ್ಕೆ ನೀಡುವುದನ್ನು ಸಮುದಾಯ ಮುಂದುವರಿಸಿಕೊಂಡು ಹೋಗಬೇಕು. ನಾರಾಯಣಗುರುಗಳ ತತ್ವವನ್ನು ಅನುಸರಿಸಿ ಯಾರ ಬಗ್ಗೆಯೂ ಭೇದ, ಕೆಟ್ಟ ಭಾವನೆ ಹೊಂದದೆ, ಸ್ವಂತ ಪರಿಶ್ರಮದಲ್ಲಿ ಉತ್ತಮ ಸ್ಥಾನ ಪಡೆಯಲು ಸಾಧ್ಯವಿದೆ ಎಂಬುದನ್ನು ಸಮುದಾಯ ಬಾಂಧವರು ನಿರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಬೇಕಿದೆ. ಸಮುದಾಯದ ಮಕ್ಕಳು ಚಾರ್ಟೆಡ್ ಅಕೌಂಟ್ ಕೋರ್ಸ್‌ಗಳಿಗೆ ಹೆಚ್ಚು ಒತ್ತು ನೀಡಿ ಅದರಲ್ಲಿ ಸಾಧನೆ ಮಾಡಬೇಕು. ಶಿಕ್ಷಣದ ಸಮಯದಲ್ಲಿ ಶ್ರಮಪಟ್ಟರೆ ಉತ್ತಮ ಭವಿಷ್ಯವಿದೆ. ಯಾವುದೇ ಸ್ಥಾನ, ಸಂಘ ಸಂಸ್ಥೆಗಳಲ್ಲಿದ್ದರೂ ನಮ್ಮ ಸೇವೆ ಪ್ರಾಮಾಣಿಕ, ನಿಷ್ಠೆಯಿಂದ ಇರಬೇಕು. ಬದ್ಧತೆಯಿಂದಲೂ ಕೆಲಸ ಮಾಡಬೇಕು. ಸಮುದಾಯದ ಸಂಘಟನೆಗಳಲ್ಲಿ ಅನ್ಯೋನ್ಯತೆ, ಐಕ್ಯತೆ ಮುಖ್ಯವಾಗಿ ಇರಬೇಕು. ಆಗ ಮಾತ್ರ ಸಂಘ ಬೆಳವಣಿಗೆ ಹೊಂದಲು ಸಾಧ್ಯವಿದೆ ಎಂದು ತಿಳಿಸಿದರು.

ಬಾಳೆಹೊನ್ನೂರು ಬಿಲ್ಲವ ಸಂಘ ಒಗ್ಗಟ್ಟಿನಲ್ಲಿರುವ ಕಾರಣ ಬೃಹತ್ ಸಮುದಾಯ ಭವನವನ್ನು ಹೊಂದಿ ಸಾರ್ವಜನಿಕರಿಗೆ ಸೇವೆ ನೀಡುತ್ತಿದ್ದು, ಈ ಸೇವೆಯನ್ನು ಮುಂದುವರಿಸಿಕೊಂಡು ಹೋಗಬೇಕು. ನಾರಾಯಣಗುರುಗಳು ನಮ್ಮ ಎಲ್ಲ ಕೆಲಸಗಳಿಗೆ ಪ್ರೇರಣೆಯಾಗಿದ್ದು, ಕೋಟಿ ಚೆನ್ನಯ್ಯ ಆಶೀರ್ವಾದವೂ ಇದಕ್ಕೆ ಕಾರಣ ಎಂದರು.

ನಾರಾಯಣಗುರುಗಳ ತತ್ವದಂತೆ ಶಿಕ್ಷಣದಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತವಾಗಬೇಕು. ಸಂಘಟನೆ ಇದ್ದಲ್ಲಿ ಸಮುದಾಯ ಬಲಗೊಳ್ಳಲಿದೆ. ಇತರ ಸಮುದಾಯಗಳಂತೆ ರಾಜಕೀಯ ಕ್ಷೇತ್ರದಲ್ಲಿಯೂ ಬಲಿಷ್ಠರಾಗಬೇಕಿದೆ. ಸಮುದಾಯದಲ್ಲಿ ಈ ಹಿಂದೆ ಇದ್ದಂತಹ ಎಸ್.ಬಂಗಾರಪ್ಪ, ಜನಾರ್ದನ ಪೂಜಾರಿ ಅವರಂತಹ ನಾಯಕತ್ವ ದೊರೆಯಬೇಕಿದೆ ಎಂದು ಹೇಳಿದರು.

ಬಿಲ್ಲವ ಸಂಘದ ಗೌರವಾಧ್ಯಕ್ಷ ಸತೀಶ್ ಅರಳೀಕೊಪ್ಪ ಮಾತನಾಡಿ, ಬಾಳೆಹೊನ್ನೂರು ಬಿಲ್ಲವ ಸಂಘ ಹಲವು ವರ್ಷಗಳ ಹಿಂದೆ ಸಮುದಾಯ ಹಿರಿಯರ ಪರಿಶ್ರಮದ ಲವಾಗಿ ಈ ಭಾಗದಲ್ಲಿ ಬೇರೂರಿದ್ದು, ಇದೀಗ ಗ್ರಾಮೀಣ ಪ್ರದೇಶದಲ್ಲಿ ಸುಸಜ್ಜಿತ ಸಮುದಾಯ ಭವನವನ್ನು ಹೊಂದಿ ಬಿಲ್ಲವ ಸಮುದಾಯಕ್ಕೆ ಆಧಾರಸ್ತಂಭವಾಗಿದೆ ಎಂದರು.

ಬಾಳೆಹೊನ್ನೂರು ವ್ಯಾಪ್ತಿಯಲ್ಲಿ 6 ಸಾವಿರಕ್ಕೂ ಅಧಿಕ ಸಮುದಾಯ ಬಾಂಧವರಿದ್ದು, ಸಂಘದಿಂದ ಪ್ರತಿ ವರ್ಷ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ, ಅನಾರೋಗ್ಯದ ಸಂದರ್ಭದಲ್ಲಿ ಸಮುದಾಯದ ವ್ಯಕ್ತಿಗಳಿಗೆ ಧನ ಸಹಾಯ ನೀಡಲಾಗುತ್ತಿದೆ ಎಂದರು.

ಬಿಲ್ಲವ ಸಂಘದ ಅಧ್ಯಕ್ಷ ಎಂ.ಜೆ.ಮೋಹನ್, ಕಾರ್ಯದರ್ಶಿ ಜಯಾ ಪ್ರಭಾಕರ್, ಖಜಾಂಚಿ ಶೇಖರ್ ಇಟ್ಟಿಗೆ, ಮಹಿಳಾ ಘಟಕದ ಅಧ್ಯಕ್ಷ ಪಾರ್ವತಮ್ಮ, ರೋಟರಿ ಕ್ಲಬ್ ಅಧ್ಯಕ್ಷ ಸಿ.ಪಿ.ರಮೇಶ್, ಸದಸ್ಯರಾದ ರಾಮು ಸಾಲ್ಯಾನ್, ಎಂ.ನಾರಾಯಣ ಮೇಲ್ಪಾಲ್, ಬಿ.ವೆಂಕಟೇಶ್, ವಿ.ಅಶೋಕ, ಚೇತನ್‌ಕುಮಾರ್, ಶ್ವೇತಾ, ರೇಖಾ ಆನಂದ್ ಇತರರಿದ್ದರು.