ಜಿಲ್ಲೆ

ಪ್ರಾಮಾಣಿಕ ಪ್ರಯತ್ನವೇ ಯಶಸ್ಸಿನ ಸೂತ್ರ

ಧಾರವಾಡ: ಶ್ರದ್ಧೆ, ಪ್ರಾಮಾಣಿಕತೆಯಿಂದ ಕೂಡಿದ ಪರಿಶ್ರಮದಿಂದ ಮಾತ್ರ ಯಶಸ್ಸು ದೊರೆಯುತ್ತದೆ ಹೊರತು, ಕಿರುದಾರಿಗಳಿಂದ ಅಲ್ಲ ಎಂದು ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ನಗರದ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷೆಗಳನ್ನು ಕಬ್ಬಿಣದ ಕಡಲೆ ಎಂದು ಭಾವಿಸಿ ಹಿಂಜರಿಯುವುದು ಬೇಡ. ಸತತ ಅಧ್ಯಯನದ ಮೂಲಕ ಗುರಿ ಮುಟ್ಟಬೇಕು ಎಂದರು.
ರಾಯಭಾಗದ ಕಂದಾಯ ನಿರೀಕ್ಷಕ ಶ್ರೀಕಾಂತ ಇರಳೆ ಮಾತನಾಡಿ, ಬಡತನ ಮತ್ತು ಕೀಳರಿಮೆ ಸಾಧನೆಗೆ ಅಡ್ಡಿಯಾಗಬಾರದು. ಕಾರ್ಯದಲ್ಲಿ ಬದ್ಧತೆಯಿಟ್ಟುಕೊಂಡು ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಉಪ್ಪಾರ ಮಾತನಾಡಿ, ಅಧ್ಯಯನ ಕಾಲವನ್ನು ತಪಸ್ಸೆಂದು ತಿಳಿದು ಎಲ್ಲ ಮೂಲಗಳಿಂದ ಜ್ಞಾನ ಸಂಗ್ರಹಿಸಿಕೊಂಡು ಪರೀಕ್ಷೆ ಎದುರಿಸಬೇಕು ಎಂದರು.
ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ., ವ್ಯವಸ್ಥಾಪಕ ದೀಪಕ ಜೋಡಂಗಿ, ವಿದ್ಯಾರ್ಥಿಗಳು, ಸಿಬ್ಬಂದಿ, ಇತರರು ಇದ್ದರು. ಸಂಯೋಜಕ ಬಸವರಾಜ ಕುಪ್ಪಸಗೌಡರ ಸ್ವಾಗತಿಸಿದರು.