ಜಿಲ್ಲೆ

ಪ್ರಾಧಿಕಾರ ರಚನೆಯಿಂದ ಶ್ರೀಕ್ಷೇತ್ರಗಳಿಗೆ ಅನುಕೂಲ

ಚಾಮರಾಜನಗರ: ರಾಜ್ಯ ಸರ್ಕಾರ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಸಿದ ಸಚಿವ ಸಂಪುಟ ಸಭೆಯಲ್ಲಿ ಶ್ರೀಮಂಟೇಸ್ವಾಮಿ ಪಂಚಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ನಿರ್ಧಾರ ಮಾಡಿರುವುದು ಶ್ರೀಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ ಹೇಳಿದರು.

ಈ ಹಿಂದೆ ಶ್ರೀಮಲೆಮಹದೇಶ್ವರಸ್ವಾಮಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಆಡಳಿತಕ್ಕೆ ಒಳಪಟ್ಟು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದೆ. ಯಾವುದೇ ಸಂಪ್ರದಾಯಗಳಿಗೂ ಅಡ್ಡಿಯಾಗದಂತೆ ನಡೆದುಕೊಂಡು ಹೋಗುತ್ತಿರುವುದನ್ನು ನಾವು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಶ್ರೀಮಂಟೇಸ್ವಾಮಿ, ಶ್ರೀರಾಚಪ್ಪಾಜಿ, ಶ್ರೀಸಿದ್ದಪ್ಪಾಜಿ ಕ್ಷೇತ್ರಗಳ ಪ್ರಾಧಿಕಾರ ರಚನೆ ಮಾಡುತ್ತಿರುವುದು ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಸಂಘಸೇನಾ ಮಾತನಾಡಿ, ಈ ಭಾಗದಲ್ಲಿ ಶ್ರೀ ಮಲೆಮಹದೇಶ್ವರ ಮತ್ತು ಶ್ರೀಮಂಟೇಸ್ವಾಮಿ ಪರಂಪರೆಗೆ ತನ್ನದೇಯಾದ ಇತಿಹಾಸವಿದೆ. ಶ್ರೀಕ್ಷೇತ್ರಗಳ ಪ್ರಾಧಿಕಾರವನ್ನು ರಚನೆ ಮಾಡುವುದರಿಂದ ಈ ಪರಂಪರೆಯ ಯಾವುದೇ ಸಂಪ್ರದಾಯಗಳಿಗೆ ದಕ್ಕೆಯಾಗುವುದಿಲ್ಲ. ಆಗಾಗಿ ಪ್ರಾಧಿಕಾರವನ್ನು ರಚನೆ ಮಾಡುವ ಮೂಲಕ ಕ್ಷೇತ್ರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ಎಂ.ನಾಗರಾಜ್, ಶಂಕರ್ ಸಿ.ಅಂಕನಶೆಟ್ಟಿಪುರ, ಸುಂದರ್ ಕಲಿವೀರ್, ಮರಿಸ್ವಾಮಿ ಚಾಟೀಪುರ, ರಾಜೇಂದ್ರ ಹಾಜರಿದ್ದರು.