ಜಿಲ್ಲೆ

ಪ್ರಾದೇಶಿಕ ಭಾಷೆಯಲ್ಲಿ ಕಾನೂನು ಪಠ್ಯಪರಿಕರ

ಮೈಸೂರು: ಪ್ರಾದೇಶಿಕ ಭಾಷೆಯಲ್ಲಿ ಕಾನೂನು ಪಠ್ಯಪರಿಕರವನ್ನು ಒದಗಿಸುವ ಕೆಲಸ ನಡೆಯುತ್ತಿದೆ ಎಂದು ಭಾರತೀಯ ಭಾಷಾ ಸಮಿತಿಯ ಕಾರ್ಯನಿರ್ವಾಹಕ ಅಧ್ಯಕ್ಷ, ನ್ಯಾಯಾಮೂರ್ತಿ ಎಲ್.ನರಸಿಂಹ ರೆಡ್ಡಿ ತಿಳಿಸಿದರು.


ಮೈಸೂರು ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗ ಮತ್ತು ಕಾನೂನು ಶಾಲೆ, ಭಾರತೀಯ ಭಾಷಾ ಸಮಿತಿ ಸಹಯೋಗದಲ್ಲಿ ಮಾನಸಗಂಗೋತ್ರಿಯ ಇಎಂಎಂಆರ್‌ಸಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಕನ್ನಡದಲ್ಲಿ ಕಾನೂನು ಪಠ್ಯಪುಸ್ತಕಗಳ ಅನುವಾದ, ಬರವಣಿಗೆ’ ಕುರಿತ 2 ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.


ಅನೇಕ ರಾಜ್ಯಗಳ ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣವನ್ನು ಪ್ರಾದೇಶಿಕ ಭಾಷೆಯಲ್ಲೇ ಪೂರೈಸುತ್ತಾರೆ. ಹೀಗಾಗಿಯೇ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಕಾನೂನು ಶಿಕ್ಷಣವನ್ನು ಪ್ರಾದೇಶಿಕ ಭಾಷೆಗಳಲ್ಲಿ ಕಲಿಯಲು ಅನುಮತಿ ನೀಡಿದೆ. ರಾಜ್ಯದಲ್ಲಿ ಶೇ.50 ರಿಂದ ಶೇ.60 ವಿದ್ಯಾರ್ಥಿಗಳು ಕಾನೂನು ಪರೀಕ್ಷೆಯನ್ನು ಕನ್ನಡದಲ್ಲೇ ತೆಗೆದುಕೊಳ್ಳುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.


ಕಾನೂನು ಸೇವೆ ಹೆಚ್ಚು ಬಲಪಡಿಸಲು, ಪಾರದರ್ಶಕತೆ ತರಬೇಕಿದೆ. ಜನರನ್ನು ನ್ಯಾಯಾಂಗದ ಆಡಳಿತದಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುವಂತೆ ಮಾಡಬೇಕಿದೆ. ಕಾನೂನು, ನ್ಯಾಯಿಕ ಕಾರ್ಯವಿಧಾನಗಳಲ್ಲಿ ಪರಿಣಾಮಕಾರಿ ಸಂವಹನ ಸಾಧ್ಯವಾಗಬೇಕಿದೆ. ಅದಕ್ಕಾಗಿ ಕಾನೂನು ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆ ಬಳಕೆ ಹೆಚ್ಚಾಗಬೇಕಿದೆ ಎಂದರು.


ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ವಿ.ಆರ್.ಶೈಲಜಾ ಮಾತನಾಡಿ, ಸಾರ್ವಜನಿಕ ಆಡಳಿತದಲ್ಲಿ ಕೆಲಸ ಮಾಡುವಾಗ ಜನರ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಸುಲಭವಾಗಿ ಕಾರ್ಯನಿರ್ವಹಣೆ ಮಾಡಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಡಾ.ಪಿ.ಈಶ್ವರ್ ಭಟ್, ಕಾನೂನು ಅಧ್ಯಯನ ವಿಭಾಗ ಮತ್ತು ಕಾನೂನು ಶಾಲೆಯ ಅಧ್ಯಕ್ಷ ಪ್ರೊ.ಟಿ.ಆರ್.ಮಾರುತಿ, ಪ್ರಾಧ್ಯಾಪಕ ಪ್ರೊ.ರಮೇಶ್ ಇತರರು ಹಾಜರಿದ್ದರು.