ಜಿಲ್ಲೆ

ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ: ಎಚ್.ಡಿ.ರೇವಣ್ಣ

ಹಾಸನ : ಎರಡು ರಾಷ್ಟ್ರೀಯ ಪಕ್ಷಗಳನ್ನು ತೊಲಗಿಸಿ ವಿವಿಧ ರಾಜ್ಯಗಳಲ್ಲಿ ಅಭಿವೃದ್ಧಿ ದಿಕ್ಕಿನಲ್ಲಿ ಸಾಗುತ್ತಿರುವ ಪ್ರಾದೇಶಿಕ ಪಕ್ಷಗಳ ಮಾದರಿಯಲ್ಲೇ ಕರ್ನಾಟಕ ರಾಜ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಜೆಡಿಎಸ್ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಹೇಳಿದರು.

ತಮಿಳುನಾಡು, ತೆಲಂಗಾಣ, ದೆಹಲಿ, ಬಿಹಾರ, ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಇರುವ ರಾಜ್ಯಗಳು ಅಭಿವೃದ್ಧಿ ದಿಕ್ಕಿನತ್ತ ಸಾಗುತ್ತಿವೆ. ಈ ಮಾದರಿಯಲ್ಲಿ ಕರ್ನಾಟಕ ರಾಜ್ಯವನ್ನು ಕೊಂಡೊಯ್ಯಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಆದ್ದರಿಂದ ರಾಜ್ಯದ ಜನ ಪ್ರಾದೇಶಿಕ ಪಕ್ಷಕ್ಕೆ ಈ ಬಾರಿ ಬೆಂಬಲ ನೀಡಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಕರ್ನಾಟಕ ರಾಜ್ಯಕ್ಕೆ ರಾಷ್ಟ್ರೀಯ ಪಕ್ಷಗಳ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಪಕ್ಷ ಈ ಹಿಂದೆ 5 ವರ್ಷ ಪೂರ್ಣ ಪ್ರಮಾಣದ ಆಡಳಿತ ಮಾಡಿತ್ತು. ಆದರೆ, ಯಾವುದೇ ಕೊಡುಗೆ ನೀಡಲಿಲ್ಲ. ಯಾವ ಮುಖ ಇಟ್ಟುಕೊಂಡು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಮತ ಕೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋಮುವಾದಿಗಳನ್ನು ದೂರ ಇಡಬೇಕು ಎಂದು ಹೇಳುವ ರಾಷ್ಟ್ರೀಯ ಪಕ್ಷ ಅದೇ ಪಕ್ಷವನ್ನು ಆಲಿಂಗನ ಮಾಡಿಕೊಳ್ಳುತ್ತಿದೆ. ತುಮಕೂರಿನ ಎಂಪಿ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಒಂದಾಗಿ ದೇವೇಗೌಡರಿಗೆ ಚಾಕು ಹಾಕುವ ಕೆಲಸ ಮಾಡಿದವು. ಇದೀಗ ಇದೀಗ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರನ್ನು ಮುಗಿಸಲೆಬೇಕು ಎಂದು ಇಬ್ಬರು ಒಂದಾಗಿದ್ದಾರೆ. ಇದು ಆಗುವುದಿಲ್ಲ ಎಂದು ಗೊತ್ತಾದಾಗ ಮೋದಿ, ಶಾ ಸೇರಿದಂತೆ ರಾಷ್ಟ್ರದ ನಾಯಕರನ್ನು ಕರೆಸಲು ಮುಂದಾಗಿದ್ದಾರೆ ಎಂದರು.

ಕಳೆದ 50 ವರ್ಷಗಳಿಂದ ಇಲ್ಲದ ಗ್ಯಾರಂಟಿಯನ್ನು ಈಗಿನ ಕಾಂಗ್ರೆಸ್ ಕೊಡಲು ಹೊರಟಿದೆ. ಗ್ಯಾರಂಟಿ ಎಂದರೆ, ಈ ಬಾರಿ ಚುನಾವಣೆಯಲ್ಲಿ ಮನೆಗೆ ವಾಪಸ್ ಹೋಗುವ ಗ್ಯಾರಂಟಿ ಎಂದು ವ್ಯಂಗ್ಯವಾಡಿದ ಅವರು, ಕೇಂದ್ರ ಮಟ್ಟದ ನಾಯಕರನ್ನು ಕರೆಸಿ ಮತ ಕೇಳುವ ಹೀನಾಯ ಪರಿಸ್ಥಿತಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಬಂದಿದೆ. ರಾಷ್ಟ್ರೀಯ ನಾಯಕರ ಆಗಮನದಿಂದ ಏನು ಪ್ರಯೋಜನ ಆಗುವುದಿಲ್ಲ. ಕೇವಲ ಭದ್ರತೆಗೆ ನಿಯೋಜಿಸುವ ಪೊಲೀಸರಿಗೆ ಹೆಚ್ಚಿನ ಭತ್ಯೆ ಸಿಗಬಹುದು ಅಷ್ಟೇ ಎಂದರು.

ಕಾಂಗ್ರೆಸ್ ಅವಧಿಯಲ್ಲಿ ಕುಡಿಯುವ ನೀರು, ಮೂಲಸೌಕರ್ಯ ಕೊಡುವಲ್ಲಿ ವಿಫಲರಾಗಿದ್ದಾರೆ. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಬಿಜೆಪಿ ಸರ್ಕಾರ ಕೂಡ ಅಪಾರ ಅನ್ಯಾಯ ಮಾಡಿದ್ದು, ಕುಮಾರಸ್ವಾಮಿ ಅವರ ಅಧಿಕಾರ ಅವಧಿಯಲ್ಲಿ ಹಾಸನ ಜಿಲ್ಲೆಗೆ ನೀಡಿದ್ದ ಸಾವಿರಾರು ಕೋಟಿ ಹಣವನ್ನು ನುಂಗಿ ನೀರು ಕುಡಿದರು ಎಂದು ಕಿಡಿ ಕಾರಿದರು.

ಇನ್ನು ಎನ್ ಆರ್ ಸಂತೋಷ್ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ರಾಷ್ಟ್ರೀಯ ಪಕ್ಷಗಳೆ ಬೇರೆ ಪಕ್ಷಗಳ ನಾಯಕರನ್ನು ಸೇರಿಸಿಕೊಳ್ಳಲು ಮುಂದಾಗಿರುವಾಗ ನಮ್ಮದೇನು. ನಮ್ಮೊಳಗೆ ಇದ್ದುಕೊಂಡು ಚಾಕು ಹಾಕುವವವರಿಗಿಂತ ಸಂತೋಷ್ ಲೇಸು ಎಂದು ಹೇಳುವ ಮೂಲಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.