ಜಿಲ್ಲೆ

ಪ್ರಾದೇಶಿಕ ಕಚೇರಿ ಹೊಸ ಕಟ್ಟಡ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ನಗರದ ಗೋಕುಲ ರಸ್ತೆಯ ಸೆಂಟ್ರಮ್ ಬಿಲ್ಡಿಂಗ್​ನಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಚೇರಿಯ ಹೊಸ ಕಟ್ಟಡದ ಉದ್ಘಾಟನೆ ಸೋಮವಾರ ನಡೆಯಿತು. ಬ್ಯಾಂಕಿನ ಬೆಂಗಳೂರು ವಲಯ ಮುಖ್ಯಸ್ಥ ನವನೀತ್ ಕುಮಾರ್ ಮಾತನಾಡಿ, ಹೊಸ ಕಚೇರಿಯು ಹುಬ್ಬಳ್ಳಿಯ ಜನರಿಗೆ ಉತ್ತಮ ದರ್ಜೆಯ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಬ್ಯಾಂಕಿನ ಬದ್ಧತೆಯನ್ನು ಎತ್ತಿ ಹಿಡಿಯಲಿದೆ. ಈ ಪ್ರದೇಶದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯಾಪ್ತಿಯನ್ನು ಮತ್ತು ಪ್ರಭಾವವನ್ನು ಮತ್ತಷ್ಟು ವಿಸ್ತರಿಸುವಲ್ಲಿ ಹೊಸ ಪ್ರಾದೇಶಿಕ ಕಚೇರಿಯು ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಬ್ಬಳ್ಳಿ ಪ್ರಾದೇಶಿಕ ಕಚೇರಿ ಮುಖ್ಯಸ್ಥ ಕೆ. ಬೈರೇಗೌಡ ಮಾತನಾಡಿ, ಸಮುದಾಯದ ಆರ್ಥಿಕ ಅಗತ್ಯಗಳನ್ನು ಪೂರೈಸಲು ಬ್ಯಾಂಕ್ ಸಮರ್ಪಿತವಾಗಿದೆ. ಹೊಸ ಪ್ರಾದೇಶಿಕ ಕಚೇರಿಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಗ್ರಾಹಕರಿಗೆ ತಡೆ ರಹಿತ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಮೀಸಲಾದ ತಂಡವನ್ನು ಹೊಂದಿದೆ ಎಂದು ಹೇಳಿದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಉದ್ಘಾಟಿಸಿ ಮಾತನಾಡಿ, ಈ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್​ನ ಕೊಡುಗೆಯನ್ನು ಶ್ಲಾಘಿಸಿದರು. ಉಪ ಪ್ರಾದೇಶಿಕ ಮುಖ್ಯಸ್ಥರಾದ ರಿತೇಶ ಕುಮಾರ್, ದೀಪಕ ಕುಮಾರ್, ಇತರರು ಇದ್ದರು.